ಸಕಲೇಶಪುರ: ರೈತರಿಗೆ ಉತ್ತಮ ಗುಣಮಟ್ಟದ ಭತ್ತದ ಬೀಜಗಳನ್ನು ವಿತರಿಸಲು ತಾಲೂಕು ಪ್ರಾಥಮಿಕ ಸೇವಾ ಕೃಷಿ ಪತ್ತಿನ ಸಹಕಾರ ಸಂಘ ಕ್ರಮ ಕೈಗೊಂಡಿದೆ ಎಂದು ಸಂಘದ ಅಧ್ಯಕ್ಷ ಕೌಡಹಳ್ಳಿ ಲೋಹಿತ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದ ಸಮೀಪವಿರುವ ತಾಲೂಕು ಪ್ರಾಥಮಿಕ ಸೇವಾ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ರೈತರಿಗೆ ರಾಜಿಮುಡಿ ಭತ್ತದ ಬೀಜ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಟಿಎಪಿಸಿಎಮ್ಎಸ್ ಕಾರ್ಯ ನಿರ್ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹೊಳೆ ನರಸೀಪುರದಿಂದ ರಾಜಮುಡಿ ಭತ್ತದ ಬೀಜವನ್ನು ತರಿಸಿ ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ರೈತರಿಗೆ ಕಡಿಮೆ ದರದಲ್ಲಿ ಭತ್ತದ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ಕೌಡಹಳ್ಳಿ ಲೋಹಿತ್ ಹೇಳಿದರು
ರೈತರಿಗೆ ಭತ್ತದ ಬೀಜಗಳನ್ನು ವಿತರಿಸಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ್, ರೈತರಿಗೆ ಟಿಎಪಿಸಿಎಮ್ಎಸ್ ಉತ್ತಮ ಗುಣಮಟ್ಟದ ಬೀಜಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ, ರೈತರು ಯಾವುದೇ ಗೊಂದಲವಿಲ್ಲದೆ ಇಲ್ಲಿ ಭತ್ತದ ಬೀಜಗಳನ್ನು ಖರೀದಿ ಮಾಡಿ ಉತ್ತಮ ಇಳುವರಿ ಪಡೆಯಬಹುದು ಎಂದರು.
ಈ ಸಂಧರ್ಭದಲ್ಲಿ ಸದಸ್ಯರುಗಳಾದ ರಮೇಶ್ ಹಲಸುಲಿಗೆ, ಉತ್ತನಹಳ್ಳಿ ರವಿ, ಹೆಗ್ಗದ್ದೆ ಉಮೇಶ್, ರೈತ ಸತೀಶ್ ನಲ್ಲುಲ್ಲಿ, ಶೀತಲ್ ಸೇರಿದಂತೆ ಇತರರು ಹಾಜರಿದ್ದರು.