ಹಾಸನ: ಲಾಕ್ಡೌನ್ ಘೋಷಣೆದಾಗಿನಿಂದಲೂ ಹಾಸನದ ದೇಶ್ ಭೂಷಣ್ ಎಂಬುವವರು, ತಮ್ಮ ಡೆಸ್ಟಿನಿ ರೈಡರ್ ಎಂಬ ತಂಡದ ವತಿಯಿಂದ ಪ್ರತಿನಿತ್ಯ 7 ರಿಂದ 8 ಬೈಕ್ಗಳ ಮೂಲಕ ಆಹಾರ ಪೊಟ್ಟಣ ತೆಗೆದುಕೊಂಡು ಬೀದಿ ನಾಯಿಗಳು, ಜಾನುವಾರುಗಳಿಗೆ ನೀಡುತ್ತಿದ್ದಾರೆ.
ಇವರ ಕಾರ್ಯಕ್ಕೆ ಇತರರು ಕೂಡಾ ಸಾಥ್ ನೀಡುತ್ತಿದ್ದಾರೆ. ಕೊರೊನಾ ವೈರಸ್ ನಡುವೆ ಬಿಡಾಡಿ ದನಗಳು, ನಾಯಿಗಳು, ಕೋತಿಗಳು ಹಾಗೂ ಅಳಿಲು ಸೇರಿದಂತೆ ವಿವಿಧ ಪಕ್ಷಿಗಳ ಹಸಿವು ನೀಗಿಸುತ್ತಿದ್ದಾರೆ. ಪ್ರಾಣಿಗಳಿಗೂ ಪೌಷ್ಟಿಕ ಆಹಾರ ಪೂರೈಸುವ ಮೂಲಕ ಮಾನವೀಯತೆ ಮರೆಯುತ್ತಿದ್ದಾರೆ.
ಆಹಾರ ನೀಡೋದಿಕ್ಕೆ ವೃತ್ತನಿರೀಕ್ಷಕ ಕಾರಣ:
ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಹಾಸನ ನಗರದಲ್ಲಿ ಪ್ರತಿನಿತ್ಯ 500ಕ್ಕೂ ಹೆಚ್ಚು ಮೂಕ ಪ್ರಾಣಿಗಳಿಗೆ ಆಹಾರ ನೀಡಲಾಗುತ್ತಿದ್ದು, ಜಾನುವಾರುಗಳಿಗೆ ಹೂ ಕೋಸು, ಕ್ಯಾರೆಟ್, ಬೀಟ್ರೂಟ್, ಮೂಲಂಗಿ ಮತ್ತು ಹುಲ್ಲನ್ನು ನೀಡಲಾಗುತ್ತಿದೆ. ಇನ್ನು ನಾಯಿಗಳಿಗೆ ಬಿಸ್ಕತ್, ಹಾಲು, ಮೊಟ್ಟೆ ಹಾಗೂ ಮೊಸರು ಮಿಶ್ರಿತ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ. ಕಾಗೆ, ಗುಬ್ಬಿ ಸೇರಿದಂತೆ ಇತರೆ ಪಕ್ಷಿಗಳಿಗೆ ಬಿಸ್ಕತ್ ಪುಡಿ, ಕಾಳು, ಅನ್ನದ ಅಗಳು ಹಾಗೂ ದ್ವಿದಳ ಧಾನ್ಯಗಳನ್ನು ನೀಡಲಾಗುತ್ತಿದೆ. ಇದಕ್ಕೆಲ್ಲಾ ಕಾರಣ ಹಾಸನ ನಗರದ ಸಿಪಿಐ ಕೃಷ್ಣಂರಾಜು ಕಾರಣ ಎನ್ನುತ್ತಾರೆ ಪ್ರಾಣಿ ಪ್ರಿಯರು.
ಇದೇ ರೀತಿ ಹಾಸನದ ಸಾಮಾಜಿಕ ಕಾರ್ಯಕರ್ತರಾದ ಉಮೇಶ್ ಅತ್ನಿ ಹಾಗೂ ಆರ್.ಜಿ. ಗಿರೀಶ್, ತಮ್ಮ ಬೈಕ್ನಲ್ಲಿ ಬಾಳೆಹಣ್ಣಿನ ಗೊನೆಗಳನ್ನು ತೆಗೆದುಕೊಂಡು ಹೋಗಿ, ಅರಸೀಕೆರೆ ಭಾಗದಲ್ಲಿನ ಕೋತಿಗಳಿಗೆ ನೀಡುತ್ತಿದ್ದಾರೆ. ಉಳಿದ ಬಾಳೆಗೊನೆಗಳನ್ನು ಕೋತಿಗಳು ಹಸಿವಾದಾಗ ತಿನ್ನಲೆಂದು ರಸ್ತೆ ಬದಿಯ ಮರಕ್ಕೆ ತೂಗು ಹಾಕಿದ್ದಾರೆ. ಪ್ರಾಣಿಗಳಿಗೆ ಆಹಾರ ಸಿಗದೆ ಸಮಸ್ಯೆ ತಲೆದೂರಿದ್ದು, ಪ್ರಾಣಿಗಳ ಈ ದಯನೀಯ ಸ್ಥಿತಿಯನ್ನು ಕಂಡು ಮರುಗಿದ ಯುವಕರು, ತಾವು ಸಂಪಾದಿಸಿ ಉಳಿಸಿದ ಹಣವನ್ನೇ ಸೇವಾ ಕಾರ್ಯಕ್ಕೆ ಬಳಸಿದ್ದಾರೆ. ಲಾಕ್ಡೌನ್ನಿಂದ ಜನರು ಮಾತ್ರವಲ್ಲ, ಪ್ರಾಣಿಗಳು ಸಂಕಷ್ಟದಲ್ಲಿವೆ. ಪ್ರಾಣಿಗಳ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇವರುಗಳ ಮಾನವೀಯ ಕಾರ್ಯ ನಿಜಕ್ಕೂ ಮೆಚ್ಚುವಂತಹುದು.