ಹಾಸನ: ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಏಳು ತಿಂಗಳಿನಿಂದ ಕೆಲಸಗಳು ನಡೆಯುತ್ತಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.
ಈಗಾಗಲೇ ಹಲವು ಬಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದರೂ ಸ್ಪಂದನೆ ದೊರೆತಿಲ್ಲ. ಹಾಗಾಗಿ ಫೆ.17 ರಂದು ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚೆ ಮಾಡಲಾಗುವುದು. ಅಲ್ಲೂ ಭರವಸೆ ದೊರೆಯದಿದ್ದರೆ ಫೆ. 24 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದ್ವೇಷದ ರಾಜಕಾರಣ ಮಾಡುವುದಿಲ್ಲವೆಂದು ಹೇಳಿದ ಯಡಿಯೂರಪ್ಪ, ಜಿಲ್ಲೆಯ ಅಭಿವೃದ್ಧಿಗೆ ಅನುದಾನ ನೀಡದೆ ಪಕ್ಷಪಾತ ಮಾಡುತ್ತಿದ್ದಾರೆ. ಸಿಎಂ ಆದ ಬಳಿಕ ಶಿವಮೊಗ್ಗಕ್ಕೆ ಮೂರು ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದಾರೆ. ಆದರೆ, ಜಿಲ್ಲೆಯ ಯೋಜನೆಗಳಿಗೆ ತಡೆ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಧರಣಿ ನಡೆಸಲಾಗುವುದು. ಅಲ್ಲಿ ಸಂಸದರು, ಶಾಸಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಧರಣಿಗೂ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಸಿ.ಎಂ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ನಾಯಕರ ಒಪ್ಪಿಗೆ ಪಡೆದೇ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್‌ಗೆ ಬೆಂಬಲ ಸೂಚಿಸಲಾಗಿದೆ. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕಾದರೆ ಜೆಡಿಎಸ್, ಕಾಂಗ್ರೆಸ್‌ನ 105 ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಸವಕಲು ನಾಣ್ಯ ಎಂಬ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ‘ಈಗ ಹಳೆಯ ನಾಣ್ಯಗಳಿಗೆ ಹೆಚ್ಚು ಬೆಲೆ ಎಂಬುದು ಅವರಿಗೆ ಗೊತ್ತಿಲ್ಲ. ನಾವು ಇರ್ತೀವೊ ಇಲ್ವೋ, ಅವರು ಇರ್ತಾರಾ ಇಲ್ವೋ ನೋಡಿಕೊಳ್ಳಲಿ. ದೆಹಲಿಯಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರ‍್ಯಾಲಿ ನಡೆಸಿದರೂ ಅಧಿಕಾರ ಹಿಡಿಯಲು ಆಗಲಿಲ್ಲ. ಆಮ್ ಆದ್ಮಿ (ಆಪ್) ಎಲ್ಲವನ್ನು ಪೊರಕೆಯಲ್ಲಿ ಗುಡಿಸಿ ಹಾಕಿದೆ’ ಎಂದು ತಿರುಗೇಟು ನೀಡಿದರು.