ಹಾಸನ: "ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ದೇವೇಗೌಡರೇ ಸ್ಪರ್ಧೆ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ" ಎಂದು ಶಾಸಕ ಎ.ಮಂಜು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರಬೇಕೆಂದು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸುವ ಮೂಲಕ ಪ್ರಜ್ವಲ್ ರೇವಣ್ಣಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಸಿ.ಎಂ.ಇಬ್ರಾಹಿಂ ಉಚ್ಛಾಟನೆ ಹಾಗೂ ನೂತನ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಹಲವಾರು ಮೀಟಿಂಗ್‌ಗಳು ಆಗಿವೆ, ಎಲ್ಲಾ ಮೀಟಿಂಗ್‌ಗಳು ಅವರ ಅಧ್ಯಕ್ಷತೆಯಲ್ಲಿಯೇ ಆಗಿವೆ, ಎಲ್ಲಾ ಮೀಟಿಂಗ್‌ಗಳಲ್ಲೂ ಸಿಎಂ ಇಬ್ರಾಹಿಂ ಇದ್ದರು. ಚರ್ಚೆ ಮಾಡಿದಾಗ ಅವರು, ನಾನು ಭಾಗಿಯಾಗಿದ್ದೇವೆ. ಯಾವ ಮೀಟಿಂಗ್‌ನಲ್ಲೂ ಹೊಂದಾಣಿಕೆ ಆಗಬಾರದು ಎಂದು ಹೇಳಲಿಲ್ಲ. ಏನು ಹೇಳದಿದ್ದಾಗ ಒಪ್ಪಿಗೆ ಇದೆ ಅಂತ ಅಲ್ವಾ. ಅವರು ಸಭೆಯಲ್ಲೇ ಚರ್ಚೆ ಮಾಡಬೇಕಿತ್ತು. ಅವರು ಈಗ ಗೊತ್ತೇ ಇಲ್ಲಾ, ಹೇಳೇ ಇಲ್ಲಾ ಅನ್ನೋದು ಅವರ ವ್ಯಕ್ತಿತ್ವಕ್ಕೆ ತರವಲ್ಲ. ನಾನು ಸಭೆಯಲ್ಲಿದ್ದೀನಿ, ಅವರು ಸಭೆಯಲ್ಲಿದ್ದಾರೆ, ಅವರೇ ಭಾಷಣ ಮಾಡಿದ್ದಾರೆ. ಈಗ ಅವರು ಬಿಜೆಪಿ ಜತೆ ಹೋಗುವುದು ತಪ್ಪು ಎಂದು ಹೇಳುವುದು ಒಳ್ಳೆಯದಲ್ಲ. ನಾನೇ ಮೊದಲು ಬಿಜೆಪಿ ವಿರುದ್ಧ ಇದ್ದೆ, ನಾನೇ ಅಡ್ಜಸ್ಟ್ ಆಗಿದ್ದೀನಿ, ಅದಕ್ಕಿಂತ ಉದಾಹರಣೆ ಏನು ಬೇಕು" ಎಂದರು.
"ಇವತ್ತು ರಾಜಕೀಯದಲ್ಲಿ ಶತ್ರುನೂ ಇಲ್ಲಾ, ಮಿತ್ರನೂ ಇಲ್ಲಾ. ಈಗ ನಮ್ಮ ಕಣ್ಣ ಮುಂದೆ ಕಾಣ್ತಿರುವುದು ಪಾರ್ಟಿ. ವ್ಯಯಕ್ತಿಕ ಹಿತಾಸಕ್ತಿಗಿಂತ ಸದ್ಯ ನಮಗೆ ದೇಶ ಮುಖ್ಯ ಅಷ್ಟೆ. ಆ ದೃಷ್ಟಿಯಲ್ಲಿ ಒಂದಾಗಬೇಕು ಎಂದು ಇಬ್ಬರು ಕೂಡ ಒಪ್ಪಿಕೊಂಡಿರುವುದು ಸ್ವಾಗತಾರ್ಹ. ಅವರವರ ಪಕ್ಷ ಅವರವರು ತೀರ್ಮಾನ ತಗೋತಾರೆ. ಕೆಲವರದ್ದು ವೈಯುಕ್ತಿಕ ನಿರ್ಧಾರ ಇರುತ್ತೆ. ಇಬ್ರಾಹಿಂ ಯಾಕೆ ಆ ರೀತಿ ಹೇಳಿದ್ದಾರೆ ಅನ್ನೋದನ್ನು ಅವರೇ ಹೇಳಬೇಕು. ಪಕ್ಷದ ಜವಾಬ್ದಾರಿ ಮೇಲೆ ಕುಮಾರಸ್ವಾಮಿ ಅವರನ್ನು ನೇಮಿಸಿಕೊಂಡಿದ್ದೇವೆ. ಅದರಲ್ಲಿ ತಪ್ಪೇನು ಇಲ್ಲವಲ್ಲಾ" ಎಂದು ಹೇಳಿದರು.
"ಹೊಂದಾಣಿಕೆ ಎನ್ನುವುದು ಮೊದಲಿಂದಲೂ ರಾಜಕಾರಣದಲ್ಲಿ ಇರುವ ಪ್ರಕ್ರಿಯೆ. ಹಿಂದೆ ರಾಮಕೃಷ್ಣ ಹೆಗ್ಡೆ, ಬಂಗಾರಪ್ಪ ಅವರು ಇದ್ದಾಗ ಬಿಜೆಪಿ ಜೊತೆ ಜನತಾದಳ ಹೊಂದಾಣಿಕೆ ಆಗಿರಲಿಲ್ವಾ. ಈಗ ಯಾಕೆ ಅದರ ಬಗ್ಗೆ ಮಾತನಾಡುತ್ತಾರೆ. ಹೊಂದಾಣಿಕೆ ಮಾಡಿಕೊಳ್ಳುವುದು ಆ ಪಕ್ಷದ ಸಂಘಟನೆ ಮತ್ತು ಶಕ್ತಿಯನ್ನು ಹೆಚ್ಚಿಗೆ ಮಾಡಲು. ಹೊಂದಾಣಿಕೆ ಮಾಡಿಕೊಂಡ ತಕ್ಷಣ ಜಾತ್ಯತೀತ ತತ್ವ ಬದಲಾವಣೆ ಆಗಲ್ಲ. ಉದಾಹರಣೆಗೆ ನಾನೇ ಅಂತರ್ಜಾತಿ ವಿವಾಹ ಆಗಿದ್ದೇನೆ. ನಾನೇನು ಚೇಂಜ್ ಆಗಿದ್ದೀನಾ, ನನ್ನ ಇನ್ಸಿಲ್ ಚೇಂಜ್ ಆಗುತ್ತಾ? ಅದಕ್ಕೂ, ಇದಕ್ಕೂ ಸಂಬಂಧವಿಲ್ಲ" ಎಂದರು.
ಮಗನಿಗಾಗಿ ನಮ್ಮ ಮನೆ ಹಾಳು ಮಾಡಿದರು ಎಂಬ ಸಿ.ಎಂ.ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಉತ್ತರಿಸಿ, "ಅವರು ಮಗನನ್ನು ಅದೇ ಪಾರ್ಟಿನಲ್ಲಿ ಎಂಎಲ್‌ಎಗೆ ನಿಲ್ಲಿಸಿರಲಿಲ್ವಾ. ಹೇಗೆ ಆ ರೀತಿ ಮಾತನಾಡುತ್ತಾರೆ. ದೇವೇಗೌಡರು ಪ್ರಧಾನಮಂತ್ರಿ ಆಗಿದ್ದಾಗ ಅವರ ಕ್ಯಾಬಿನೆಟ್‌ನಲ್ಲಿ ವಿಮಾನಯಾನ ಖಾತೆ ಸಚಿವರಾಗಿದ್ದರು. ಆಗ ಯಾರ ಮನೆ ಉದ್ಧಾರ ಆಯ್ತು. ತೊಂದರೆಯಾದಾಗ ವೈಯುಕ್ತಿಕ ವಿಚಾರ ಮಾತನಾಡುವುದು ಸರಿಯಲ್ಲ. ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರ್ಪಡೆ ವಿಚಾರವಾಗಿ ಮಾತನಾಡಿ, ಅವರ ಹತ್ರನೇ ಹೌಸ್‌ಫುಲ್, ನನ್ನನ್ನು ಯಾಕೆ ಕರಿತ್ತಾರೆ. ಅಲ್ಲಿಂದ ಹೋಗುವವರನ್ನು ತಡೆ ಹಿಡಿಯಲು ಈ ರೀತಿ ಮಾಡುತ್ತಿದ್ದಾರೆ ಎಂದಿದ್ದರು" ಎಂದು ಇಬ್ರಾಹಿಂ ಹೇಳಿಕೆಗೆ ಶಾಸಕ ಎ.ಮಂಜು ತಿರುಗೇಟು ನೀಡಿದರು.
"ನಾನು ಈಗಾಗಲೇ ಮೀಟಿಂಗ್‌ನಲ್ಲಿ ಮನವಿ ಮಾಡಿದ್ದೆ, ಹಾಸನ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದಿಂದ ದೇವೇಗೌಡರು ನಿಲ್ಲಬೇಕೆಂದು ಒತ್ತಾಯ ಮಾಡಿದ್ದೇನೆ. ಇವತ್ತು ಹೇಳುತ್ತಿದ್ದೇನೆ, ಅವರದ್ದು ಇದು ಕೊನೆ ಎಲೆಕ್ಷನ್. ಅವರು ಈ ಜಿಲ್ಲೆಯಿಂದ ನಿಲ್ಲಬೇಕು ಎನ್ನುವುದು ನನ್ನ ಒತ್ತಾಯ" ಎಂದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿಗೆ ಪಿಣರಾಯಿ ವಿಜಯನ್ ಒಪ್ಪಿಗೆ ವಿಚಾರ: ಕೇರಳ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ದೇವೇಗೌಡರ ಹೇಳಿಕೆ