ಹಾಸನ : ಸಂಸದ ಪ್ರಜ್ವಲ್ ರೇವಣ್ಣನವರು ಏನೋ ಸಾಧನೆ ಮಾಡಿರುವ ಹಾಗೆ ಎಲ್ಲೆಂದರಲ್ಲಿ ಹೇಳಿಕೆ ನೀಡುತ್ತಿದ್ದು, ಕೋರ್ಟಿನಿಂದ ಸಮನ್ಸ್ ಬಂದಾಗ ಜಿಲ್ಲೆಯಿಂದ ಓಡಿ ಹೋಗಿದ್ದು ನಾನಲ್ಲ, ಯಾರೆಂದು ಯೋಚಿಸಿ ಎಂದು ವಕೀಲ ಜಿ. ದೇವರಾಜೇಗೌಡ ಟಾಂಗ್ ಕೊಟ್ಟರು.
ಸುದ್ದಿಗೋಷ್ಠಿಯಲಿ ಮಾತನಾಡಿದ ಅವರು, ಮೂರು ತಿಂಗಳಲ್ಲಿ ಸಂಸದ ಸ್ಥಾನದಿಂದ ಹೊರಗೆ ಬರುತ್ತಾರೆ ಎಂದು ನಾನು ಕೂಡ ಕೆಲ ಸಂದರ್ಭಗಳಲ್ಲಿ ಹೇಳಿದ್ದೆ, ಎ. ಮಂಜು ಕೂಡ ಹೇಳಿದ್ದರು. ಕಾನೂನು ಪ್ರಕಾರವೇ ಎಲ್ಲವೂ ನಡೆದಿದೆ. ಸಂಸದರೇ ನಾನು ಜಿಲ್ಲೆ ಬಿಟ್ಟು ಓಡಿ ಹೋಗಿದ್ದೇನಾ ಯೋಚಿಸಿ? ಜಿಲ್ಲೆ ಬಿಟ್ಟು ನೀವು ಪಲಾಯಾನ ಮಾಡಿದ್ದೀರಾ, ನೀವು ಎಲ್ಲೆಲ್ಲಿ ಓಡಿ ಹೋಗಿದ್ದೀರಾ ಎಂಬುದರ ಬಗ್ಗೆ ಹೈಕೋರ್ಟ್ ಆದೇಶದ ಕಾಪಿ ತಂದಿದ್ದೇನೆ. ಕೋರ್ಟ್ನಿಂದ ಮೊದಲು ಸಮನ್ಸ್ ಕಳುಹಿಸಿದಾಗ ನೀವು ಊರಲ್ಲಿ ಇಲ್ಲ ಎಂದರೆ ಕಾಣಿಸುತ್ತಿಲ್ಲ ಎಂದರ್ಥ ಎಂದರು.
ಎರಡನೇ ಸಮನ್ಸ್ ಜಾರಿಯಾದಾಗ ಪಾರ್ಟಿನೇ ಇಲ್ಲ. ಕರ್ನಾಟಕ ಉಚ್ಛ ನ್ಯಾಯಾಲಯ ಕಳುಹಿಸಿದಂತಹ ನೋಟಿಸ್, ಮೂರನೇ ಸಮನ್ಸ್‌ಗೆ ವ್ಯಕ್ತಿ ಸ್ಥಳದಲ್ಲಿ ಹಾಜರಿರುವುದಿಲ್ಲ. ಸಮನ್ಸ್‌ಗೆ ಸ್ಪಂದಿಸದಿದ್ದರೇ ನಾನು ಕಳ್ಳರೋ ನೀವು ಕಳ್ಳರೋ ಎಂದು ಪ್ರಶ್ನೆ ಮಾಡಿದ ಅವರು, ನೀವು ಊರು ಬಿಟ್ಟು ಓಡಿ ಹೋಗಿದ್ದೀರಿ? ಜಿಲ್ಲೆಯ ಉನ್ನತ ಸ್ಥಾನದಲ್ಲಿರುವವರು ಹಾಸನ ಜಿಲ್ಲೆ ಬಿಟ್ಟು ಓಡಿ ಹೋಗಿದ್ದೀರಿ ಎಂದು ಕಿಡಿಕಾರಿದರು.
ಕೋರ್ಟ್ ರೆಕಾರ್ಡ್ ಪ್ರಕಾರ, ಒಂದು ತಿಂಗಳು ದೇಶ ಬಿಟ್ಟು ಹೋಗಿದ್ದೀರಿ ಎಂದ ನೀವು ಇಲ್ಲೇ ಕಳ್ಳರಾಗಿ ಬಚ್ಚಿಟ್ಟು ಕುಳಿತಿದ್ದೀರಿ ಎಂದು ದೂರಿದರು. ಎಂತಹ ಮಹಾತ್ಮರ ಮೊಮ್ಮಗನಾಗಿ ಹುಟ್ಟಿದ್ದೀರಿ. ಜಿಲ್ಲೆ, ರಾಜ್ಯ ಹಾಗೂ ದೇಶ ಕೊಂಡಾಡುವ ವ್ಯಕ್ತಿಯ ಮೊಮ್ಮಗನಾಗಿ ಅವರ ಕೀರ್ತಿಗೆ ಕಳಂಕ ತರುವ ಕೆಲಸ ಮಾಡಬಾರದು ಎಂದು ಬುದ್ದಿವಾದ ಹೇಳಿದರು.
ನೂತನ ಸಂಸದರಾದ ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನದ ಅನರ್ಹತೆ ವಿಚಾರವಾಗಿ ಉಚ್ಚ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯುತ್ತಿದ್ದು ಸೂಕ್ತ ತೀರ್ಪು ಹೊರಬೀಳಲಿದೆ. ನಾಮಪತ್ರ ಸಲ್ಲಿಕೆ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದನ್ನು ಪ್ರಸ್ತಾಪ ಮಾಡುತ್ತ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.