ಹಾಸನ: ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವುದನ್ನು ಖಂಡಿಸಿ ಸಮಾಜದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದರು.
ಸವಿತಾ ಸಮಾಜ ಎಂದರೆ ಅತ್ಯಂತ ಶೋಷಿತ ಮತ್ತು ಹಿಂದುಳಿದ ಸಣ್ಣ ಸಮುದಾಯವಾಗಿದ್ದು, ಮೂಲ ವೃತ್ತಿಯಾದ ಕ್ಷೌರಿಕ ಹಾಗೂ ಮಂಗಳವಾದ್ಯದಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಿಗೆ ಸೇವೆ ನೀಡುವ ಮೂಲಕ ಜೀವನ ಸಾಗಿಸಿಕೊಂಡು ಬರುತ್ತಿದೆ.
ಅನೇಕರು ನಮ್ಮ ವೃತ್ತಿಯನ್ನು ನಿಂದಿಸುವ ಪದ ಬಳಕೆ ಮಾಡುತ್ತಿರುವುದು ನೋವು ತರುತ್ತಿದ್ದರೂ ನಾವು ತಾಳ್ಮೆ ಕಳೆದುಕೊಳ್ಳುತ್ತಿಲ್ಲ. ಕೆಲ ದಿನಗಳ ಹಿಂದೆ ರಾಜ್ಯಸಭಾ ಅಭ್ಯರ್ಥಿಯಾಗಿ ಸಮಾಜದ ನಾಯಕ ಅಶೋಕ್ ಗಸ್ತಿ ಅವರನ್ನು ಆಯ್ಕೆ ಮಾಡಿರುವುದು ನಮ್ಮ ಸಮುದಾಯಕ್ಕೆ ಸಿಕ್ಕ ಗೌರವ.
ಆದರೆ ಗಸ್ತಿ ಅವರಿಗೆ ಸಿಕ್ಕಿರುವ ಅವಕಾಶದ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ರಿಯಾಜ್ ರಿಜ್ ಎಂಬ ವ್ಯಕ್ತಿ ಟೀಕಿಸಿದ್ದಾರೆ ಎಂದು ದೂರಿದ್ದಾರೆ.
ಇಂತಹ ಹೇಳಿಕೆಗಳ ಮೂಲಕ ಕ್ಷೌರಿಕ ವೃತ್ತಿ ಹಾಗೂ ಇಡಿ ಸವಿತಾ ಸಮುದಾಯಕ್ಕೆ ಅಗೌರವ ಪ್ರದರ್ಶಿಸಿರುವುದು ನಮಗೆಲ್ಲಾ ನೋವನುಂಟು ಮಾಡಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಕೂಡಲೇ ರಿಯಾಜ್ ರಿಜ್ ಎಂಬುವರನ್ನು ಬಂಧಿಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.