ಹಾಸನ: ಇಲ್ಲಿಯವರೆಗೂ ನಾವು ಅರೆಕಾಲಿಕ ವೈದ್ಯ ಹುದ್ದೆಯನ್ನು ನಿರ್ವಹಿಸುತ್ತಿದ್ದು, ಕೂಡಲೇ ಸರ್ಕಾರ ನಮ್ಮ ಸೇವೆಯನ್ನು ಪರಿಗಣಿಸಿ ಶಾಶ್ವತ ಮಾಡಬೇಕು. ಇಲ್ಲವಾದರೆ ಜುಲೈ 8ರಿಂದ ರಾಜ್ಯಾದ್ಯಂತ ವೈದ್ಯರ ಸೇವೆ ಸ್ಥಗಿತಗೊಳಿಸುತ್ತೇವೆಂದು ಇಲ್ಲಿನ ವೈದ್ಯರು ಜಿಲ್ಲಾಧಿಕಾರಿ ಆರ್.ಗಿರೀಶ್ಗೆ ಮನವಿ ಸಲ್ಲಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ವೈದ್ಯೆ ಸ್ನೇಹ, ವೈದ್ಯರಾಗಿ ನಾವುಗಳು ಸುಮಾರು ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಕರ್ನಾಟಕದಲ್ಲಿ ಸುಮಾರು 507 ಜನ ಅರೆಕಾಲಿಕ ವೈದ್ಯರು ಕೆಲಸ ನಿರ್ವಹಿಸುತ್ತಿದ್ದೇವೆ. ನಮ್ಮ ಕೆಲಸವನ್ನು ಇದುವರೆಗೂ ಶಾಶ್ವತ ಮಾಡಿಲ್ಲ. ಕೊರೊನಾವನ್ನೂ ಲೆಕ್ಕಿಸದೆ ಹಾಸನದಿಂದ ನೂರಾರು ಮಂದಿ ಹೋಗಿ ಆರೋಗ್ಯ ಸಚಿವ ಶ್ರೀರಾಮುಲು ಬಳಿ ಮನವಿ ಮಾಡಿದಾಗ ಅವರು ಸ್ಪಂದಿಸಿದ್ದರು. ನಂತರದಲ್ಲಿ ನಮಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಿಂದ ಬಂದಿರುವ ನಾವುಗಳು ಸರ್ಕಾರ ನಮ್ಮ ಜೊತೆ ಇದೆ ಎಂಬ ಭರವಸೆಯಲ್ಲಿ ಅಲ್ಲೇ ಕೆಲಸ ಮಾಡುತ್ತಿದ್ದೇವೆ. ಆದರೆ ಇದುವರೆಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈಗ ಮನೆಯಲ್ಲಿ ಪೋಷಕರು ಕೆಲಸ ಬಿಡಲು ಹೇಳುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಕೊರೊನಾ ವೇಳೆ ನಾವು ಕೂಡ ಶ್ರಮಿಸಿದ್ದೇವೆ. ಇದನ್ನು ಪರಿಗಣಿಸಿ ಕೂಡಲೇ ಸರ್ಕಾರ ನಮ್ಮನ್ನೆಲ್ಲಾ ಇದೇ ಕೆಲಸದಲ್ಲಿ ಶಾಶ್ವತ ಮಾಡಬೇಕು. ಇಲ್ಲವಾದರೇ ಜುಲೈ 8ರಿಂದ ನಾವು ಯಾರೂ ಕೆಲಸಕ್ಕೆ ಹೋಗುವುದಿಲ್ಲ ಎಂದು ತಿಳಿಸಿದರು.