ಹಾಸನ: ಉತ್ತರ ಕರ್ನಾಟಕದ ನೆರೆ ಪೀಡಿತ ಸಂತ್ರಸ್ತರಿಗೆ ಸ್ಪಂದಿಸದಿದ್ದಲ್ಲಿ ವರಿಷ್ಠರ ಸಲಹೆ ಮೇರೆಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಸಂತ್ರಸ್ತರಿಗೆ ಒಳಿತಾಗಲಿ ಎಂಬ ಕಾರಣಕ್ಕೆ ಸರ್ಕಾರಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿದ್ದಾರೆ. ಅದಕ್ಕೆ ನಾವು ಕೂಡ ಬೆಂಬಲ ನೀಡುತ್ತೇವೆ ಎಂದು ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದ್ದಾರೆ.
ಶ್ರವಣಬೆಳಗೊಳ ಸಮೀಪದ ಚಿಕ್ಕಬಿಳ್ತಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಕಟ್ಟಡ ಉದ್ಘಾಟಿಸಿದ ನಂತರ 'ಈಟಿವಿ ಭಾರತ' ಜೊತೆಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ತರಲು ಹೊರಟಿರುವ ಆರ್ಸಿಇಪಿ ಒಪ್ಪಂದದಿಂದ ರಾಜ್ಯದ ಹೈನುಗಾರಿಕೆ ಮೇಲೆ ಹೊಡೆತ ಬೀಳಲಿದೆ. ಕರ್ನಾಟಕದಲ್ಲಿ ಹೈನುಗಾರಿಕೆಯ ಕ್ಷೇತ್ರ ಈಗ 2ನೇ ಸ್ಥಾನದಲ್ಲಿದೆ. ಈ ಒಪ್ಪಂದದಿಂದ ಅವರ ಬೆನ್ನು ಮೂಳೆ ಮುರಿದಂತಾಗುತ್ತದೆ. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಕೇಂದ್ರ ರೈತರ ಹಿತ ಕಾಪಾಡುವಂತಹ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ರು.
ಯಾವುದೇ ಸರ್ಕಾರ ಆದ್ರೂ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಆಚರಿಸುವುದು ಸರ್ವೇಸಾಮಾನ್ಯ. ಆದರೆ ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ. ಹಾಗಾಗಿ ನೊಂದವರ ನೆರವಿಗೆ ಸರ್ಕಾರ ಧಾವಿಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇನ್ನು, ಮುಖ್ಯಮಂತ್ರಿ ಯಡಿಯೂರಪ್ಪ ಅವರದ್ದು ಎನ್ನಲಾದ ಆಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಾಲಕೃಷ್ಣ, ಅದು ಅವರ ಆಂತರಿಕ ವಿಚಾರ. ಅದರ ಬಗ್ಗೆ ನಾವು ಮಾತನಾಡುವುದು ಸೂಕ್ತವಲ್ಲ. ಆದರೆ, ಉತ್ತರ ಕರ್ನಾಟಕದ ಭಾಗದ ರೈತರ ಬದುಕು ಹಸನಾಗಬೇಕು. ಹಾಗಾಗಿ ಕುಮಾರಣ್ಣ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದರು.