ಹಾಸನ: ಕೊಬ್ಬರಿಯನ್ನು ಬೆಂಬಲ ಬೆಲೆಯೊಂದಿಗೆ ನಾಫೆಡ್ ಮೂಲಕ ಖರೀದಿಸುವ ಕುರಿತು ಮುಖ್ಯಮಂತ್ರಿಗಳು ಸಮಾಲೋಚಿಸುತ್ತಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ನೂತನ ಉಸ್ತುವಾರಿ ಸಚಿವರು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕೊರೊನಾ ಸ್ಥಿತಿಗತಿ, ನಿಯಂತ್ರಣ ಕ್ರಮಗಳು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಸಚಿವರು ವಿವರಗಳನ್ನು ಪಡೆದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ಸಚಿವರು ನಡೆಸಿದ ಪ್ರಥಮ ಸಭೆ ಇದಾಗಿತ್ತು. ಈ ಹಿಂದೆ ವಿವಿಧ ತಾಲೂಕುಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದ ಬಿಲ್ ಬಾಕಿಯನ್ನು ಇತ್ಯರ್ಥಪಡಿಸಿ ಹಣ ಪಾವತಿ ಮಾಡುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೃಷಿ, ಮಳೆ ಪರಿಸ್ಥಿತಿ, ತೋಟಗಾರಿಕೆ, ಕುಡಿಯುವ ನೀರು ಪೂರೈಕೆ ವಿಷಗಳ ಕುರಿತು ಸಹ ಹಲವು ನಿರ್ದೇಶನಗಳನ್ನು ನೀಡಿದರು. ಶೀಘ್ರವಾಗಿ ಸಭೆ ಕರೆದು ಎಲ್ಲಾ ವಿಚಾರಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ಸಾಮಾಜಿಕ ಭದ್ರತಾ ಯೋಜನೆಗಳಡಿ ಬಾಕಿ ಇರುವ ಹಣ ಪಾವತಿ ಮಾಡಿ ಫಲಾನುಭವಿಗಳಿಗೆ ಶೀಘ್ರವಾಗಿ ತಲುಪುವಂತೆ ಹಾಗೂ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ನಿರ್ದೇಶನ ನೀಡಿದರು.
ಬಳಿಕ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಜಿಲ್ಲಾಡಳಿತ ಕೋವಿಡ್-19 ನಿಯಂತ್ರಣಕ್ಕೆ ಉತ್ತಮ ಕ್ರಮಗಳನ್ನು ಕೈಗೊಂಡರೂ ಹೊರ ರಾಜ್ಯಗಳಿಂದ ಆಗಮಿಸಿದವರಿಂದ ಜಿಲ್ಲೆಗೆ ಕೊರೊನಾ ಸೋಂಕು ಬಂದಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. ಹೆಚ್ಚಿನ ಮುಂಜಾಗ್ರತೆ ವಹಿಸಬೇಕಿದೆ ಎಂದರು.