ಹಾಸನ: ಹಳೇ ದ್ವೇಷದ ಹಿನ್ನೆಲೆ ಎರಡು ಕುಟುಂಬದ ನಡುವೆ ಮುಖಾಮುಖಿ ಜಗಳ ನಡೆದು ಒಂದು ಕುಟುಂಬದ ಪತಿ - ಪತ್ನಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಹಾಸನ ಜಿಲ್ಲೆಯ ಹಿರಿಸಾವೆ ಪಟ್ಟಣದಲ್ಲಿ ಜರುಗಿದೆ.
ವಿನೋದಮ್ಮ (39) ಮತ್ತು ರವಿ(45) ಹಲ್ಲೆಗೊಳಗಾದ ದಂಪತಿ. ಮಾಜಿ ಸೈನಿಕ ಚಂದ್ರಮೂರ್ತಿ(56) ಮತ್ತು ಆತನ ಪತ್ನಿ ಲತಾದೇವಿ(45) ಹಲ್ಲೆ ಮಾಡಿರುವ ಆರೋಪಿಗಳು.
ಘಟನೆಗೆ ಕಾರಣ ಏನು:
ಜಮೀನಿಗೆ ಹೋಗುವ ದಾರಿಯ ವಿಚಾರದಲ್ಲಿ ಕಳೆದ ಏಳು ವರ್ಷಗಳಿಂದಲೂ ಈ ಎರಡೂ ಕುಟುಂಬದ ನಡುವೆ ಜಗಳ ನಡೆಯುತ್ತಲೇ ಇತ್ತು. ವಾರದ ಹಿಂದಷ್ಟೇ ಜಗಳ ತಾರಕಕ್ಕೇರಿದ್ದರಿಂದ ಮಧ್ಯಸ್ತಿಕೆ ವಹಿಸಿದ ಪೊಲೀಸರು ತಾತ್ಕಾಲಿಕವಾಗಿ ತಿಳಿಗೊಳಿಸಿದ್ದರು.
ಮಕ್ಕಳಿಲ್ಲ ಎಂದು ನಿಂದಿಸುತ್ತಿದ್ದ ವಿನೋದಮ್ಮ:
ಮಕ್ಕಳಿಲ್ಲದ ಮಾಜಿ ಸೈನಿಕ ದಂಪತಿಗೆ ವಿನೋದಮ್ಮ ಮಾತ್ರ ದಾರಿಯ ವಿಚಾರವಾಗಿ ಪದೇಪದೇ ಅವ್ಯಾಚ ಶಬ್ದಗಳಿಂದ ಅವರಿಗೆ ಪ್ರತಿನಿತ್ಯ ನಿಂದಿಸುತ್ತಿದ್ದಳು. ಇದರ ಜೊತೆಗೆ ಮಕ್ಕಳ ವಿಚಾರವಾಗಿಯೂ ಪದೇ ಪದೇ ನಿಂದನೆ ಮಾಡುತ್ತಿದ್ದಳಂತೆ.
ಇದರಿಂದ ಕೋಪಗೊಂಡ ಮಾಜಿ ಸೈನಿಕ ಚಂದ್ರಮೂರ್ತಿ ಜ. 11ರ ಸಂಜೆ ವಿನೋದಮ್ಮನಿಗೆ ಮಕ್ಕಳ ವಿಚಾರವಾಗಿ ಮಾತನಾಡಬೇಡ ಎಂದು ಹೇಳಿದ್ದಾನೆ. ಆದರೆ, ವಿನೋದಮ್ಮ ಮತ್ತೆ ಅದೇ ವಿಚಾರ ತೆಗೆದು ನಿಂದನೆ ಮಾಡಿದ್ದರಿಂದ ಸಿಟ್ಟಿಗೆದ್ದ ಚಂದ್ರಮೂರ್ತಿ ಆಕೆ ಮೇಲೆ ಮಚ್ಚಿನಿಂದ ಮನಸೋಇಚ್ಛೆ ಹಲ್ಲೆ ಮಾಡಿದ್ದಾನೆ.
ಇದನ್ನು ಕಂಡ ವಿನೋದಮ್ಮನ ಪತ್ನಿ ರವಿ ಪಕ್ಕದಲ್ಲಿದ್ದ ತೆಂಗಿನ ಎಡೆ ಮಟ್ಟಿಯಿಂದ ಚಂದ್ರ ಮೂರ್ತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಆದರೆ, ಚಂದ್ರ ಮೂರ್ತಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದರಿಂದ ವಿನೋದ ಮತ್ತು ರವಿಗೆ ಗಂಭೀರವಾಗಿ ಗಾಯಗಳಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪಿಗಳಾಗಿರುವ ಚಂದ್ರ ಮೂರ್ತಿ ಮತ್ತು ಆಕೆಯ ಪತ್ನಿ ಲತಾ ದೇವಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಿರಿಸಾವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಡೆದಾಡುವ ದೃಶ್ಯಾವಳಿಗಳು ಎದುರು ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.