ಹಾಸನ: ಪ್ರಯಾಣ ಮಾಡುವ ಪ್ರಯಾಣಿಕರ ಜೀವ ಚಾಲಕನ ಕೈಯಲಿದ್ದು, ಶೀಘ್ರ ತಲುಪುವ ಗುರಿಗಿಂತ ಸುರಕ್ಷಿತ ಚಾಲನೆಗೆ ಮೊದಲ ಆದ್ಯತೆ ನೀಡಿ ಎಂದು ಕೆಎಸ್ಆರ್ಟಿಸಿ ಬಸ್ ಚಾಲಕರಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸಲಹೆ ನೀಡಿದರು.
ನಗರದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಚಾಲಕರು ಮೊದಲು ಸುರಕ್ಷತೆಗೆ ಆದ್ಯತೆ ಕೊಡಬೇಕು. ಸಾರಿಗೆ ಬಸ್ನಲ್ಲಿ ಚಾಲಕರು ಪ್ರಯಾಣಿಕರನ್ನು ಶೀಘ್ರವಾಗಿ ತಲುಪಿಸಬೇಕು ಎಂಬುದಕ್ಕಿಂತ ಸುರಕ್ಷಿತವಾಗಿ ತಲುಪಿಸಬೇಕು ಎಂಬ ಗುರಿ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಿವಿಲ್ ನ್ಯಾಯಾಧೀಶ ಎಸ್.ಬಿ ಕೆಂಬಾವಿ ಮಾತನಾಡಿ, ಪ್ರತಿದಿನ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಸಾವು-ನೋವುಗಳನ್ನು ನಾವು ಕೇಳುತ್ತಿದ್ದೇವೆ ಮತ್ತು ನೋಡುತ್ತಿದ್ದೇವೆ. ರಸ್ತೆಗಳು ನರಕಕ್ಕೆ ದಾರಿಯಾದರೆ ವಾಹನಗಳು ಯಮ ಸ್ವರೂಪಿಯಾಗಿವೆ. ಹಾಗಾಗಿ ನಿಗಾ ವಹಿಸಿ ಪ್ರಯಾಣಿಸಬೇಕು ಎಂದು ಎಚ್ಚರಿಸಿದರು.