ಸಕಲೇಶಪುರ: ತಾಲೂಕಿನ ಹೆತ್ತೂರು ಗ್ರಾಮದ ಮಹಿಳೆಯೋರ್ವರಿಗೆ ಸೈಬರ್ ವಂಚಕರು ದೂರವಾಣಿ ಕರೆ ಮೂಲಕ ಒಟಿಪಿ ಸಂಖ್ಯೆ ಪಡೆದು ಬ್ಯಾಂಕ್ ಖಾತೆಯಿಂದ ಹಣ ಲಪಾಟಾಯಿಸಿರುವ ಘಟನೆ ನಡೆದಿದೆ.
ತಾಲೂಕಿನ ಹೆತ್ತೂರು ಗ್ರಾಮದ ಶ್ರುತಿ ಸಂತೋಷ್ ಎಂಬುವರಿಗೆ 7903507244 ಸಂಖ್ಯೆಯಿಂದ ಕರೆ ಮಾಡಿದ ಸೈಬರ್ ವಂಚಕರು. ನಾವು ಎಸ್ಬಿಐ ನಿಂದ ಮಾತನಾಡುತ್ತಿರುವುದು ನಿಮ್ಮ ಎಟಿಎಮ್ ಕಾರ್ಡ್ ಅವಧಿ ಮುಕ್ತಾಯಗೊಂಡಿದೆ. ಕೂಡಲೇ ಇದನ್ನು ಸರಿಪಡಿಸಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ಎಟಿಎಮ್ ಕಾರ್ಯನಿರ್ವಹಿಸುವುದಿಲ್ಲ. ನಿಮ್ಮ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರುತ್ತದೆ ಇದನ್ನು ನಮಗೆ ಹೇಳಿ ನಾವು ಇದನ್ನು ಕಂಪ್ಯೂಟರ್‌ಗೆ ಎಂಟ್ರೀ ಮಾಡುತ್ತೇವೆ ಎಂದು ಕನ್ನಡದಲ್ಲೇ ಮಾತನಾಡಿದ್ದಾರೆ.
ಇದೇ ವೇಳೆ ಶ್ರುತಿ ಅವರ ಮೊಬೈಲ್‌ಗೆ ಬ್ಯಾಂಕಿನಿಂದ ಮೆಸೇಜ್ ಬಂದಿದ್ದು, ನಂತರ ಒಟಿಪಿ ಸಂಖ್ಯೆಯನ್ನು ಪಡೆದ ಕಿಡಿಗೇಡಿಗಳು ಆಕೆಯ ಖಾತೆಯಿಂದ ಸುಮಾರು 99,189 ರೂ.ಗಳನ್ನು ಲಪಟಾಯಿಸಿದ್ದಾರೆ. ಹಣ ಕಳೆದುಕೊಂಡ ಮಹಿಳೆ ತುಂಬಾ ಬಡವರಾಗಿದ್ದು, ಈ ಕುರಿತು ಹಾಸನದ ಸೈಬರ್ ಕ್ರೈಂ ಹಾಗೂ ಹೆತ್ತೂರು ಬ್ಯಾಂಕ್‌ಗೆ ದೂರು ನೀಡಿರುತ್ತಾರೆ. ಈ ಕುರಿತು ತನಿಖೆ ನಡೆಸಿದಾಗ ಪಂಜಾಬ್ ಬ್ಯಾಂಕ್‌ವೊಂದಕ್ಕೆ ಹಣ ರವಾನೆಯಾಗಿರುವುದು ತಿಳಿದು ಬಂದಿದೆ.