ಹಾಸನ: ಹಳೆಯ ದ್ವೇಷದ ಹಿನ್ನೆಲೆ ಸ್ನೇಹಿತನನ್ನ ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆಯ ಕೊಣನೂರಿನಲ್ಲಿ ನಡೆದಿದೆ. ಹರೀಶ್ (40) ಕೊಲೆಯಾದ ವ್ಯಕ್ತಿಯಾಗಿದ್ದು, ಲೋಕೇಶ್ (38) ಕೊಲೆ ಮಾಡಿದವ.
ಕೊಲೆಯಾದ ಹರೀಶ್ ಮೂಲತಃ ಕೊಡಗು ಜಿಲ್ಲೆಯ ಕುಶಲನಗರದವನು. ಈ ಘಟನೆಗೂ ಮುನ್ನ ಇಬ್ಬರು ಒಟ್ಟಿಗೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನ ಖಾಸಗಿ ಲಾಡ್ಜ್ ಒಂದರಲ್ಲಿ ಮದ್ಯಪಾನ ಮಾಡಿದ್ದಾರೆ. ಕಂಠಪೂರ್ತಿ ಕುಡಿದಿದ್ದ ಹರೀಶ್ ಶೌಚಗೃಹ ಉಪಯೋಗಿಸಲು ಹೋದ ವೇಳೆ ಆತನನ್ನು ಮಾರಕಾಸ್ತ್ರಗಳಿಂದ ಲೋಕೇಶ್ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಸ್ವತಃ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ನರ್ಸ್ ಮೃತದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಮೇಲ್ನೋಟಕ್ಕೆ ಆರೋಪಿಯ ಸಂಬಂಧಿಕಳೊಬ್ಬಳ ಜೊತೆ ಕೊಲೆಯಾದ ಹರಿಶ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದು ಆರೋಪಿಗೆ ಗೊತ್ತಾಗಿ ಈ ಹಿಂದೆ ಒಂದೆರಡು ಬಾರಿ ಸಣ್ಣಪುಟ್ಟ ಗಲಾಟೆ ನಡೆದು ಊರಿನ ಗ್ರಾಮಸ್ಥರು ಬುದ್ಧಿ ಹೇಳಿ ಕಳುಹಿಸಿದ್ದರಂತೆ. ಆದರೆ ತನ್ನ ಚಾಳಿ ಬಿಡದ ಹರೀಶ್, ಆಕೆಯೊಂದಿಗೆ ಅನೈತಿಕ ಸಂಬಂಧ ಮುಂದುವರಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
ಹಾಸನದ ಹಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಶವ ರವಾನೆ ಮಾಡಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.