ಹಾಸನ: ಜಿಲ್ಲೆಯಲ್ಲಿ ಸುರಿದ ಸತತ ಮಳೆಯಿಂದ ವಾಣಿಜ್ಯ ಬೆಳೆಗಳು ನೆಲಕಚ್ಚಿದ್ದು, ಕಟಾವಿಗೆ ಬಂದ ಬೆಳೆಗಳು ರೈತನ ಕೈ ಸೇರುವ ಮೊದಲೇ ಮಳೆ ನೀರು ಪಾಲಾಗಿವೆ. ಜಿಲ್ಲಾದ್ಯಂತ ಆಗಸ್ಟ್ನಿಂದ ಸುರಿದ ಭಾರಿ ಮಳೆಗೆ ಬೆಳೆ, ವಿದ್ಯುತ್ ಕಂಬ, ರಸ್ತೆ, ಮನೆಗಳು ಸೇರಿದಂತೆ ಕೋಟ್ಯಂತರ ನಷ್ಟ ಸಂಭವಿಸಿದೆ.
ಜಿಲ್ಲೆಯ ಐದು ತಾಲೂಕುಗಳನ್ನು ಮಳೆ ಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದೆ. ಹಾಸನ, ಆಲೂರು, ಬೇಲೂರು, ಸಕಲೇಶಪುರ ತಾಲೂಕುಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನಾ (ಎನ್ಡಿಆರ್ಎಫ್) ಅಡಿಯಲ್ಲಿ ಪರಿಹಾರ ಸಿಗಲಿದ್ದು, 350 ಕೋಟಿ ರೂ.ಗೂ ಅಧಿಕ ನಷ್ಟವಾಗಿರುವುದಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಭತ್ತ, ಮೆಕ್ಕೆಜೋಳ ಸೇರಿ 4,440 ಹೆಕ್ಟೇರ್ ಪ್ರದೇಶದಲ್ಲಿ (ಮೆಕ್ಕೆಜೋಳ 3,740 ಹೆಕ್ಟೇರ್, ಭತ್ತ 560 ಹೆಕ್ಟೇರ್, ಟೊಬ್ಯಾಕೋ 140 ಹೆಕ್ಟರ್) ವಿವಿಧ ಬೆಳೆಗಳು ನಾಶವಾಗಿವೆ. ಅಲ್ಲದೆ, 7,924 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಹಾಗೂ ಮೆಣಸು ಬೆಳೆ ನಾಶವಾಗಿದೆ. ಈಗಾಗಲೇ ಸರ್ಕಾರ ಪರಿಹಾರವನ್ನು ಕ್ರಮಾನುಸಾರವಾಗಿ ಬಿಡುಗಡೆ ಮಾಡುತ್ತಿದೆ.
ಆದರೆ, ತಂತ್ರಜ್ಞಾನ ದೋಷದಿಂದ ಶೇ.60ಕ್ಕೂ ಅಧಿಕ ನಷ್ಟ ಅನುಭವಿಸಿದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೆಲವರಿಗೆ ಪ್ರತೀ ಸಲವೂ ಪರಿಹಾರ ಮರೀಚಿಕೆಯಾಗುತ್ತಿದೆ ಎಂಬುದು ರೈತರ ಆರೋಪ. ಬೆಳೆದ ಬೆಳೆಗಳಿಗೆ ಬೆಂಬಲ ಮತ್ತು ಸೂಕ್ತ ಪರಿಹಾರ ನೀಡಿದರೆ ರೈತರ ಬದುಕು ಹಸನಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರೈತರ ಮನವಿ ಮಾಡುತ್ತಾರೆ.
ಐದಾರು ವರ್ಷಗಳ ಹಿಂದೆ ಸರಿಯಾಗಿ ಮಳೆಯಾಗದೇ ಬೆಳೆದ ಬೆಳೆ ಒಣಗಿ ಹೋಗುತ್ತಿತ್ತು. ಅದಾದ ನಂತರ ನಿರಂತರ ಸುರಿಯುತ್ತಿರುವ ಮಳೆಯಿಂದ ಬೆಳೆ ನೀರುಪಾಲಾಗುತ್ತಿದೆ. ರೈತರಿಗೆ ಹೆಚ್ಚು ಮಳೆಯಾದರೂ ಕಷ್ಟ, ಮಳೆಯಾಗದಿದ್ದರೂ ಸಂಕಷ್ಟ. ಒಂದು ಖುಷಿಯ ವಿಚಾರವೆಂದರೆ ಪಾತಾಳಕ್ಕಿಳಿದಿದ್ದ ಅಂತರ್ಜಲ ವೃದ್ದಿಸಿದೆ.