ಹಾವೇರಿ: ಕೊರೊನಾ ಲಾಕ್ಡೌನ್ ಬಳಿಕ ಇದೇ ಮೊದಲ ಬಾರಿಗೆ ಹಾವೇರಿ ಜಾನುವಾರು ಮಾರುಕಟ್ಟೆ ವಹಿವಾಟು ಆರಂಭಿಸಿದೆ. ಉತ್ತರಕರ್ನಾಟಕದ ಪ್ರಮುಖ ಜಾನುವಾರು ಮಾರುಕಟ್ಟೆಗಳಲ್ಲಿ ಹಾವೇರಿ ಸಹ ಒಂದಾಗಿದ್ದು, ಇಲ್ಲಿನ ಕುರಿಗಳನ್ನು ಬೆಂಗಳೂರು ಸೇರಿದಂತೆ ತಮಿಳುನಾಡಿನ ವರ್ತಕರು ಖರೀದಿಸುತ್ತಾರೆ.
ಕುರಿ, ಎತ್ತು, ಎಮ್ಮೆ ಹಸುಗಳನ್ನು ಜಾನುವಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಜಾನುವಾರು ಮಾರುಕಟ್ಟೆಗೆ ಗುರುವಾರ ಸಾವಿರಾರು ಸಂಖ್ಯೆಯಲ್ಲಿ ರೈತರು, ದಲ್ಲಾಳಿಗಳು ಹಾಗೂ ಖರೀದಿದಾರರು ಆಗಮಿಸಿ, ಜಾನುವಾರುಗಳ ಮಾರಾಟ ಮತ್ತು ಖರೀದಿಯಲ್ಲಿ ನಿರತರಾಗಿದ್ದರು. ಆದರೆ, ಈ ವೇಳೆ ಸಾರ್ವಜನಿಕರು ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೇ ಜಾನುವಾರು ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿರುವುದು ಕಂಡು ಬಂತು.
ಜಾನುವಾರು ಮಾರುಕಟ್ಟೆ ಪ್ರವೇಶಿಸುವ ರೈತರಿಗೆ ಸ್ಕ್ರೀನಿಂಗ್ ಇಲ್ಲ, ಮಾಸ್ಕ್ ಮತ್ತು ಸಾಮಾಜಿಕ ಅಂತರ ಇರಲಿಲ್ಲ. ಇದ್ಯಾವುದರ ಅರಿವೇ ಇಲ್ಲದೆ, ರೈತರು ಜಾನುವಾರುಗಳ ಮಾರಾಟ-ಖರೀದಿಯಲ್ಲಿ ನಿರತರಾಗಿದ್ದರು.
ಮಾರುಕಟ್ಟೆಯಲ್ಲಿ ಎಪಿಎಂಸಿ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ, ಪೊಲೀಸರು ಸಹ ಇತ್ತ ಮುಖ ಮಾಡಿಲ್ಲ. ಆದರೆ, ಮಾರುಕಟ್ಟೆಗೆ ಬಂದ ರೈತರಿಂದ, ವಾಹನಗಳಿಂದ ಪ್ರವೇಶ ಶುಲ್ಕ ವಸೂಲಿ ಮಾತ್ರ ಜೋರಾಗಿತ್ತು. ಮೂರನೇಯ ಅಲೆ ಭೀತಿಯ ನಡುವೆ ರಾಜ್ಯ ಹಾಗೂ ನೆರೆ ರಾಜ್ಯದ ವರ್ತಕರು ಮಾರುಕಟ್ಟೆಗೆ ಆಗಮಿಸುತ್ತಾರೆ. ಹೀಗಾಗಿ, ಎಪಿಎಂಸಿ ಅಧಿಕಾರಿಗಳು ಇನ್ನಾದರೂ ಜಾನುವಾರು ಮಾರುಕಟ್ಟೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಸಣ್ಣ ನಿರ್ಲಕ್ಷ್ಯ ಸಹ ದೊಡ್ಡ ಸಮಸ್ಯೆ ತಂದೊಡ್ಡುವುದರಲ್ಲಿ ಸಂದೇಹವಿಲ್ಲ.
ಇದನ್ನೂ ಓದಿ: ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ನಮ್ಮ ಬೆಂಬಲ: ಅಣ್ಣಾಮಲೈ ಘೋಷಣೆ