ಹಾಸನ: ಕೋವಿಡ್-19 ಸಂದರ್ಭದಲ್ಲಿ ಜಿಲ್ಲೆಯ ಜಿಲ್ಲಾ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಬಗ್ಗೆ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂಬುದರ ವಿವರ ಇಲ್ಲಿದೆ.
ನಗರದ ಬಿಎಂ ರಸ್ತೆಗೆ ಹೊಂದಿಕೊಂಡಿರುವ ಜಿಲ್ಲಾ ಉಪ ಕಾರಾಗೃಹದಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಚಾರಣಾಧೀನ ಕೈದಿಗಳನ್ನು ಬಂಧನದಲ್ಲಿ ಇಡಲಾಗಿದೆ. ಸದ್ಯ ಜಿಲ್ಲಾ ಉಪ ಕಾರಾಗೃಹದಲ್ಲಿ ಏಳು ಮಂದಿ ಮಹಿಳಾ ಕೈದಿಗಳು ಹಾಗೂ 199 ಮಂದಿ ಪುರುಷ ಕೈದಿಗಳಿದ್ದಾರೆ.
207 ಮಂದಿ ವಿಚಾರಣಾಧೀನ ಕೈದಿಗಳಿಗೆ ಈಗಾಗಲೇ ಪ್ರತೀ ಕೊಠಡಿಗೆ ಒಂದು ಬಾಟಲ್ ಸ್ಯಾನಿಟೈಸರ್ ಹಾಗೂ ಪ್ರತಿಯೊಬ್ಬರಿಗೂ ಮಾಸ್ಕ್ ವಿತರಣೆ ಮಾಡಲಾಗಿದೆ. ಕೋವಿಡ್ ಹರಡದಂತೆ ಪ್ರತಿದಿನ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಜೈಲಿನ ವೈದ್ಯಾಧಿಕಾರಿಗಳ ಸಹಾಯದಿಂದ ಜ್ವರ ತಪಾಸಣೆ ಪರೀಕ್ಷೆ ಮಾಡಲಾಗುತ್ತದೆ. ಅಲ್ಲದೆ ಪ್ರತೀ ಕೊಠಡಿಗೆ ನಾಲ್ಕು ಮಂದಿಯಂತೆ ಬಂಧನದಲ್ಲಿಡುವ ಮೂಲಕ ಸಾಮಾಜಿಕ ಅಂತರ ಕಾಪಾಡುವಲ್ಲಿ ಕೂಡ ಕಾರಾಗೃಹದ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿದ್ದಾರೆ.
ಜೈಲಿನಲ್ಲಿದ್ದ ಕೈದಿಗಳಿಗೆ ಇದುವರೆಗೂ ಕೋವಿಡ್ ಸೋಂಕು ಹರಡಿಲ್ಲ ಎಂದರೆ ಅದು ಅಧಿಕಾರಿಗಳ ಮುಂಜಾಗ್ರತೆ ಕ್ರಮವನ್ನು ಎತ್ತಿ ತೋರಿಸುತ್ತದೆ. ಹೊರಗಿನಿಂದ ಕೈದಿಗಳನ್ನು ಭೇಟಿ ಮಾಡಲು ಬರುವ ಸಂದರ್ಶಕರಿಗೆ ಕೋವಿಡ್-19 ಇದ್ದ ಕಾರಣ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ ಬಳಿಕ ಕಾರಾಗೃಹದ ಪ್ರತೀ ಗೋಡೆಗಳಿಗೆ ಮತ್ತು ಜೈಲಿನ ಆವರಣದ ಸುತ್ತಲೂ ಸ್ಯಾನಿಟೈಸರ್ ಮಾಡಿಸಲಾಗಿತ್ತು.
ಇದಾದ ಬಳಿಕ ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಪ್ರತೀ ಸಂದರ್ಶಕರು ಹಾಗೂ ಸಿಬ್ಬಂದಿಗಾಗಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡುವ ಸ್ವಯಂಚಾಲಿತ ಯಂತ್ರ ಅಳವಡಿಸಿದ್ದಾರೆ. ಪ್ರತೀ ಕೋಣೆಗೆ ನಾಲ್ಕು ಮಂದಿಯಂತೆ ಇರಿಸಲಾಗಿದ್ದು, ಸಾಮಾಜಿಕ ಅಂತರ ಕಾಪಾಡುವುದರಲ್ಲೂ ಕೂಡ ಯಶಸ್ವಿಯಾಗಿದ್ದಾರೆ.