ಹಾಸನ: ರಾಜ್ಯದಲ್ಲಿ ವೈದ್ಯರ ಕೊರತೆ ಹೆಚ್ಚಾಗುತ್ತಿದ್ದು ಸರ್ಕಾರಿ ಆಸ್ಪತ್ರೆಗೆ ಕೆಲಸ ನಿರ್ವಹಿಸಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾದರೆ ಜನಸಾಮಾನ್ಯರಿಗೆ ಕಷ್ಟವಾಗುತ್ತದೆ ಎಂದು ಶಾಸಕ ಶಿವಲಿಂಗೇಗೌಡ ಆತಂಕ ವ್ಯಕ್ತಪಡಿಸಿದರು.
ನಗರದ ಹೊಯ್ಸಳ ಸಭಾಂಗಣದಲ್ಲಿ ನಡೆದ ಕೊವೀಡ್-19 ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಈಗಿರುವ ಪರಿಸ್ಥಿತಿಯಲ್ಲಿ 5 ಕೋಟಿ ಖರ್ಚು ಮಾಡಿ ಓದಿರುವ ಡಾಕ್ಟರ್ಗಳು, ಸರ್ಕಾರ ಕೊಡುವ 70 ಸಾವಿರ ರೂ.ಗಳಿಗೆ ಬಂದು ಕೆಲಸ ಮಾಡುತ್ತಾರೆಯೇ? ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಕೋಟಿ ಕೋಟಿ ಹಣ ಖರ್ಚು ಮಾಡಿ ಓದಿದವರು ಯಾಕೆ ಈ ಕೆಲಸಕ್ಕೆ ಬರುತ್ತಾರೆ. ಸರ್ಕಾರಿ ಕೆಲಸಕ್ಕಿಂತ ಖಾಸಗಿ ಆಸ್ಪತ್ರೆ ಯನ್ನು ಪ್ರಾರಂಭಿಸಿ ದುಡ್ಡು ಮಾಡುವುದನ್ನು ನೋಡ್ತಾರೆ ಹೀಗಾದರೆ ಗ್ರಾಮೀಣ ಭಾಗದ ಜನರ ಪರಿಸ್ಥಿತಿ ಏನು ಎಂದು ಶಾಸಕ ಶಿವಲಿಂಗೇಗೌಡ ಆತಂಕ ವ್ಯಕ್ತಪಡಿಸಿದರು.
ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ಮಾತನಾಡಿ ಕಳೆದ 13 ವರ್ಷಗಳಿಂದ ನಾನು ಶಿವಲಿಂಗೇಗೌಡರನ್ನ ಗಮನಿಸುತ್ತಾ ಬಂದಿದ್ದೇನೆ. ಅವರು ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಪ್ರತಿಬಾರಿಯೂ ವೈದ್ಯರ ಕೊರತೆಯ ಬಗ್ಗೆ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ನಾವು ಎಂಬಿಬಿಎಸ್ ಸರ್ಕಾರಿ ಸೀಟು ಕೊಡುವ ಮೊದಲೇ ವಿದ್ಯಾರ್ಥಿಯಿಂದ ಒಪ್ಪಂದ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಷರತ್ತು ವಿಧಿಸಿರುತ್ತಾರೆ. ಕಾಲೇಜಿಗೆ ಪ್ರವೇಶ ನೀಡಿದರೆ ರಾಜ್ಯದಲ್ಲಿ ವೈದ್ಯರ ಕೊರತೆ ಉಂಟಾಗದು. ಇಲ್ಲದಿದ್ದರೆ ಇನ್ನು 20 ವರ್ಷವಾದರೂ ಇದೇ ರೀತಿ ರಾಜ್ಯದಲ್ಲಿ ವೈದ್ಯರ ಕೊರತೆ ಕಾಡುತ್ತಲೆ ಇರುತ್ತದೆ ಎಂದರು.
ಹಾಗಾಗಿ ದಯಮಾಡಿ ಮುಂದಿನ ದಿನದಲ್ಲಿ ಸಂಪುಟ ಸಮಿತಿಯಲ್ಲಿ ಇದರ ಬಗ್ಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಂಡರೆ ಮಾತ್ರ ಸರ್ಕಾರಿ ಆಸ್ಪತ್ರೆಯಲ್ಲಿ ಗ್ರಾಮೀಣ ಭಾಗದ ಜನತೆಗೆ ಹೆಚ್ಚು ವೈದ್ಯಕೀಯ ಸೌಲಭ್ಯಗಳು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.