ಶ್ರವಣಬೆಳಗೊಳ(ಹಾಸನ): ಬೆಂಗಳೂರಲ್ಲಿ ಶಿಕ್ಷಕಿಯೊಬ್ಬರ ಮೇಲೆ ಲಾರಿ ಹರಿದು ಮೃತಪಟ್ಟ ದುರ್ಘಟನೆ ಮಾಸುವ ಮುನ್ನವೇ ಮತ್ತೊಂದು ಇಂತಹದ್ದೇ ಘಟನೆ ಜಿಲ್ಲೆಯ ಶ್ರವಣಬೆಳಗೊಳ ಸಮೀಪ ಸಂಭವಿಸಿದ್ದು, ದಂಪತಿ ದುರಂತ ಅಂತ್ಯ ಕಂಡಿದ್ದಾರೆ.
ಧನಂಜಯ (45) ಮತ್ತು ಕಾಮಿನಿ (35) ಎಂಬುವರೆ ಮೃತ ದಂಪತಿ. ಇವರ ಪುತ್ರ ರಕ್ಷಿತ್‌ಗೌಡ (15) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ದಂಪತಿಯು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮದವರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ಭೀಕರ ಅಪಘಾತ: ಶಿಕ್ಷಕಿ ತಲೆ ಮೇಲೆ ಹರಿದ ಗೂಡ್ಸ್ ವಾಹನ
ಇವರು ಮಗನೊಂದಿಗೆ ಬೆಂಗಳೂರಿಗೆ ಬೈಕ್ನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ದಮ್ಮನಿಂಗಳ ಗ್ರಾಮದ ರಚನಾ ಶಾಲೆ ಬಳಿ ರಸ್ತೆಬದಿಯ ಗುಂಡಿ ಮೇಲೆ ಬೈಕ್ ಚಲಿಸಿದ್ದು, ಬಳಿಕ ನಿಯಂತ್ರಣ ತಪ್ಪಿ ಮೂವರೂ ಕೆಳಕ್ಕೆ ಬಿದ್ದಿದ್ದಾರೆ. ಬೈಕ್ ರಸ್ತೆಯಿಂದ ಹೊರಹೋಗಿ ತಗ್ಗಿನಲ್ಲಿ ಬಿದ್ದಿತ್ತು.
ತೀವ್ರ ರಕ್ತಸ್ರಾವವಾಗಿ ಕಾಮಿನಿ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಧನಂಜಯರನ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಪುತ್ರ ರಕ್ಷಿತ್‌ಗೌಡನಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು.. ಕಾಲೇಜ್ ಗೇಟ್ ಬಂದ್ ಮಾಡಿದ ಪ್ರಾಂಶುಪಾಲ