ಹಾಸನ : ಜಿಲ್ಲೆಯಲ್ಲಿಂದು 53 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಈವರೆಗೆ 545 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 275 ಸಕ್ರಿಯ ಪ್ರಕರಣಗಳಿವೆ. 27 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸರ್ಕಾರದ ನಿಯಮಾನುಸಾರ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ತುರ್ತು ನಿಗಾ ಘಟಕದಲ್ಲಿ 16 ಜನರನ್ನು ಇಡಲಾಗಿದೆ ಎಂದರು. ಹೊಸದಾಗಿ 53 ಪ್ರಕರಣ ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದರು.
ಕೊರೊನಾ ಉಲ್ಬಣವಾಗುತ್ತಿರುವ ಹಿನ್ನೆಲೆ ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತ, ಕೆಮ್ಮು ಇದ್ದರೆ ಹಿಮ್ಸ್ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಬೇಕು. ಸಭೆ-ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೊನಾ ಸೋಂಕು ತಡೆಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.