ಹಾಸನ: ಜಿಲ್ಲೆಯಲ್ಲಿ ಇಂದು ಎಸ್ಎಸ್ಎಲ್ಸಿ ಪರೀಕ್ಷ ಬರೆಯುತ್ತಿದ್ದ ಓರ್ವ ವಿದ್ಯಾರ್ಥಿ ಸೇರಿ 16 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 331 ಕೊರೊನಾ ಪ್ರಕರಣಗಳು ಕಂಡುಬಂದಿವೆ. ಈ ಪೈಕಿ 238 ಜನರು ಗುಣಮುಖರಾಗಿದ್ದಾರೆ. ಇನ್ನೂ 92 ಜನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕು ಸಾಲಿಗ್ರಾಮದ ಓರ್ವ, ಹೊಳೆನರಸೀಪುರಕ್ಕೆ ಚಿಕಿತ್ಸೆಗೆಂದು ಬಂದಾಗ ಸೋಂಕು ಪತ್ತೆಯಾಗಿದೆ. ಅದು ಹೊಳೆನರಸೀಪುರ ತಾಲೂಕಿನಲ್ಲಿ 5, ಅರಕಲಗೂಡಿನಲ್ಲಿ 3, ಅರಸೀಕೆರೆಯಲ್ಲಿ 6 ಹಾಗೂ ಹಾಸನದಲ್ಲಿ 2 ಪ್ರಕರಣ ಸೇರಿ ಒಟ್ಟು 16 ಜನರಿಗೆ ಇಂದು ಸೋಂಕು ಇರುವುದು ದೃಢಪಟ್ಟಿದೆ ಎಂದರು.
ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಆತ ಕಳೆದೆರೆಡು ದಿನಗಳ ಹಿಂದೆ ಡೆಂಗ್ಯೂ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಸೇರಿದ್ದ. ನಂತರ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು, ಈ ವೇಳೆ ಡೆಂಗ್ಯೂ ಜೊತೆಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಎರಡನೇ ದಿನದ ಪರೀಕ್ಷೆಯಲ್ಲಿ ಆತನಿಗೆ ಕೊರೊನಾ ಇರುವುದು ಸಾಬೀತಾಗಿದೆ. ಈತನೊಂದಿಗೆ 18 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಮಕ್ಕಳ ಕುರಿತು ಶಿಕ್ಷಣ ಇಲಾಖೆಗೆ ಸ್ಪಷ್ಟೀಕರಣಕ್ಕಾಗಿ ಪತ್ರ ಬರೆಯಲಾಗಿದೆ. ಪಾಸಿಟಿವ್ ಇರುವ ವಿದ್ಯಾರ್ಥಿ ಮುಂದಿನ ಪರೀಕ್ಷೆ ಬರೆಯುವಂತಿಲ್ಲ. ಮುಂದೆ ಪೂರಕ ಪರೀಕ್ಷೆಗೆ ಅವಕಾಶ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಒಟ್ಟು 30 ನಿರ್ಬಂಧಿತ ವಲಯವೆಂದು ಗುರುತಿಸಲಾಗಿದ್ದು, 28 ದಿನಗಳ ಗಡುವು ಪೂರ್ಣಗೊಂಡ ಬಳಿಕ 11 ಝೋನ್ಗಳನ್ನು ತೆರವು ಮಾಡಲಾಗಿದೆ. ಇಂದು ಹೊಳೆನರಸೀಪುರದಲ್ಲಿ 3, ಅರಕಲಗೂಡಿನಲ್ಲಿ 3 ಹಾಗೂ ಹಾಸನದಲ್ಲಿ 2 ಸೇರಿದಂತೆ ಒಟ್ಟು 8 ಪ್ರದೇಶವನ್ನ ನಿರ್ಬಂಧಿತ ವಲಯಗಳೆಂದು ಘೋಷಿಸಲಾಗಿದೆ ಎಂದರು.