ಸಕಲೇಶಪುರ (ಹಾಸನ): ತಾಲೂಕಿನಾದ್ಯಾಂತ ಮುಂದಿನ ಆಗಸ್ಟ್ 18ರವರೆಗೆ ಕ್ಷೌರಿಕ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದು ತಾಲೂಕಿನ ಸವಿತಾ ಸಮಾಜದ ಅಧ್ಯಕ್ಷ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರತಿದಿನ ಸಾವಿರ-ಸಾವಿರ ಕೊರೊನಾ ಸೋಂಕಿತ ಪ್ರಕರಣ ದಾಖಲಾಗುತ್ತಿದೆ. ಗ್ರೀನ್ ಝೋನ್ ಇದ್ದ ತಾಲೂಕು ಇದಕ್ಕೆ ಹೊರತಾಗಿಲ್ಲ. ಸಮುದಾಯಕ್ಕೂ ಕೊರನಾ ಅಂಟುವ ಭೀತಿ ಹೆಚ್ಚಾಗುತ್ತಿರುವ ಕಾರಣ ಸಾಮಾಜಿಕ ಜವಾಬ್ದಾರಿಯನ್ನರಿತು ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಕ್ಷೌರಿಕರು ಸಹ ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಹಣದ ಆಸೆಗಾಗಿ ಕದ್ದು-ಮುಚ್ಚಿ ಕಟಿಂಗ್ ಮಾಡುವುದು ಬೇಡ. ಆರೋಗ್ಯ ಹದಗೆಟ್ಟರೆ ಕುಟುಂಬ ಬೀದಿಗೆ ಬೀಳುತ್ತದೆ ಈ ಕುರಿತು ಕ್ಷೌರಿಕರು ಎಚ್ಚರ ವಹಿಸಬೇಕು. ಸರ್ಕಾರ ಕ್ಷೌರಿಕರಿಗೆ ಘೋಷಣೆ ಮಾಡಿರುವ 5,000 ರೂಪಾಯಿ ಇನ್ನು ಸರಿಯಾಗಿ ಸಿಕ್ಕಿಲ್ಲ, ಕನಿಷ್ಠ ಕಾರ್ಮಿಕ ಇಲಾಖೆ ವತಿಯಿಂದ ಆಹಾರದ ಕಿಟ್ಗಳನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರಾದ ಶ್ಯಾಮ್, ಆನಂದ್, ಜಗಣ್ಣ, ಚೆಲುವಮೂರ್ತಿ ಹಾಜರಿದ್ದರು.