ಹಾಸನ: ಸರ್ಕಾರದ ಯಡವಟ್ಟು ಹಾಗೂ ಗೊಂದಲದ ತೀರ್ಮಾನಗಳಿಂದಾಗಿಯೇ ಕೊರೊನಾ ಎಲ್ಲೆಡೆ ವ್ಯಾಪಿಸುತ್ತಿದ್ದು, ಲಾಕ್‌ಡೌನ್ ಮತ್ತಿತರ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆಯಾ ಕ್ಷೇತ್ರದ ಶಾಸಕರಿಗೆ ಅಧಿಕಾರ ಕೊಡಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಎಚ್.ಡಿ. ರೇವಣ್ಣ ಆಗ್ರಹಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸಚಿವ ಗೋಪಾಲಯ್ಯ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅರಸೀಕೆರೆ ಹಾಗೂ ಹೊಳೆನರಸೀಪುರ ಕ್ಷೇತ್ರಗಳ ಜೆಡಿಎಸ್ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಹಾಗೂ ಎಚ್.ಡಿ. ರೇವಣ್ಣ ಮಾತನಾಡಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ವೇಳೆ ಮಾತನಾಡಿದ ಕೆ.ಎಂ. ಶಿವಲಿಂಗೇಗೌಡರು, ‘ಕೇವಲ ಐದಾರು ಜನರದ್ದೇ ಸರ್ಕಾರಾನಾ? ನಾವೆಲ್ಲಾ ಗೆದ್ದು ಹೋಗಿರೋದಕ್ಕೆ ಸರ್ಕಾರ ಅಲ್ವಾ? ಜನರ ಕಷ್ಟ ಸುಖಕ್ಕೆ ಸ್ಪಂದಿಸೋಕೆ ನಮಗೆ ಆಗ್ತಿಲ್ಲ. ನಾವು ನಮ್ಮ ಜನರನ್ನ ಉಳಿಸಿಕೊಳ್ಳಬೇಕು ಎಂದು ಒದ್ದಾಡುತ್ತಿದ್ದೇವೆ. ನಿತ್ಯ ಜನರ ಗೋಳು ನೋಡಿ ಕಣ್ಣೀರು ಹಾಕಿ ಮಲಗುವಂತಾಗಿದೆ. ಸಿಎಂಗೆ ನಮ್ಮದೊಂದು ಸಭೆ ಮಾಡಲು ಆಗಲ್ವ? ಬೆಂಗಳೂರಲ್ಲಿ ಎ.ಸಿ. ರೂಂನಲ್ಲಿ ಕೂತು ಸರ್ಕಾರ ನಡೆಸುವುದಲ್ಲ ಎಂದು ಹೇಳಿದರು.
ನಮಗೆ ಅಧಿಕಾರ ಕೊಡಿ, ನಮ್ಮ ತಾಲ್ಲೂಕನ್ನು ಕಾಪಾಡಿಕೊಳ್ಳೋದು ನಮಗೆ ಗೊತ್ತಿದೆ. ಅರ್ಧ ದಿನದ ಲಾಕ್ಡೌನ್ಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು.
ಶಾಸಕ ಎಚ್.ಡಿ. ರೇವಣ್ಣ ಆಕ್ರೋಶ:
ಸಭೆಯಲ್ಲಿ ಹೊಳೆನರಸೀಪುರ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಲಾಕ್ ಡೌನ್ ಇಲ್ಲ ಎಂದು ಸಿಎಂ ಘೋಷಣೆ ಮಾಡಿದ್ದಾರೆ. ಆದರೆ ಹಾಸನದಲ್ಲಿ ಮಧ್ಯಾಹ್ನದ ನಂತರ ಲಾಕ್‌ಡೌನ್ ಮಾಡಲೇಬೇಕು ಎಂದು ಪಟ್ಟು ಹಿಡಿದರು.
ಎಲ್ಲಾ ವರ್ತಕರು ಹಾಗೂ ಜನ ಸಾಮಾನ್ಯರು ಸೇರಿ ನಮ್ಮ ತಾಲ್ಲೂಕಿನಲ್ಲಿ ಮಧ್ಯಾಹ್ನದ ನಂತರ ಲಾಕ್‌ಡೌನ್ ಜಾರಿ ಮಾಡಿದ್ದೆವು. ಆದರೆ ಈಗ ಸಿಎಂ ಲಾಕ್‌ಡೌನ್ ಇಲ್ಲ ಅಂದ ಕೂಡಲೇ ಜನ ಬೇಕಾಬಿಟ್ಟಿ ಅಡ್ಡಾಡುತ್ತಿದ್ದಾರೆ. ಹೀಗಾದ್ರೆ ಕೊರೊನಾ ಸೋಂಕು ಜಾಸ್ತಿಯಾಗಲಿದೆ. ಮಧ್ಯಾಹ್ನದ ನಂತರ ಲಾಕ್‌ಡೌನ್ ಮಾಡಲೇಬೇಕು ಎಂದು ಸಚಿವ ಗೋಪಾಲಯ್ಯ ಅವರಲ್ಲಿ ಆಗ್ರಹಿಸಿದರು.