ಹಾಸನ : ಅರಸೀಕೆರೆ ತಾಲೂಕಿನ ಬಾಣವಾರ ಸಮೀಪದ ಕಾಚಿಘಟ್ಟ ಗ್ರಾಮದ ವ್ಯಕ್ತಿಯೋರ್ವನಿಗೆ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಆತ ವಾಸ ಮಾಡುತ್ತಿದ್ದ ಏರಿಯಾವನ್ನು ಸೀಲ್‌ಡೌನ್ ಮಾಡಲಾಗಿದೆ.
ವ್ಯಾಪಾರದ ಉದ್ದೇಶದಿಂದ ಆತ ಮುಂಬೈಗೆ ಪ್ರಯಾಣ ಬೆಳೆಸಿದ್ದ. ಬಳಿಕ ವಾಪಸ್ ಬಂದ ಹಿನ್ನೆಲೆಯಲ್ಲಿ ಆತನ ಗಂಟಲು ದ್ರವ ಪರೀಕ್ಷೆ ಮಾಡಿದ ಸಂದರ್ಭದಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಆತನನ್ನು ಹಾಸನದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆತ ವ್ಯಾಪಾರ ಮುಗಿಸಿ ಬಂದು ಎರಡು ದಿನಗಳ ಕಾಲ ಕುಟುಂಬಸ್ಥರೊಂದಿಗಿದ್ದ ಹಿನ್ನೆಲೆ ಕುಟುಂಬದ ಸದಸ್ಯರುಗಳ ಆರೋಗ್ಯ ತಪಾಸಣೆ ಮಾಡಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಸದ್ಯ ಏಳು ದಿನಗಳ ಕಾಲ ಕಾಚೀಘಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಅಗ್ರಹಾರ ಬಡಾವಣೆಯ ಒಂದು ಅಡ್ಡ ರಸ್ತೆಯನ್ನು ಆರೋಗ್ಯ ಅಧಿಕಾರಿಗಳು ಪೊಲೀಸರ ನೇತೃತ್ವದಲ್ಲಿ ಸೀಲ್‌ಡೌನ್ ಮಾಡಿದ್ದಾರೆ.
ಸೀಲ್‌ಡೌನ್ ಪ್ರದೇಶದ ಸುತ್ತಮುತ್ತ ಸ್ಯಾನಿಟೈಸರ್ ಸಿಂಪಡಿಸಿದ್ದಾರೆ. ಈ ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು, ನಿತ್ಯ ಮಾಸ್ಕ್ ಹಾಕಿ ಸ್ಯಾನಿಟೈಸರ್ ಬಳಸಿ ಕೈಯನ್ನು ತೊಳೆಯುವುದು ಸೇರಿ ಕೆಲ ನಿಯಮಗಳನ್ನು ಪಾಲಿಸುವ ಮೂಲಕ ಸೋಂಕನ್ನು ತಡೆಗಟ್ಟಲು ಸಹಕಾರ ನೀಡಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದರು.
ಜಿಲ್ಲೆಯಲ್ಲಿ ಸೋಂಕು ಪ್ರಕರಣ ಹೆಚ್ಚುತ್ತಿವೆ. ಚನ್ನರಾಯಪಟ್ಟಣದಲ್ಲಿ 4, ಹೊಳೆನರಸೀಪುರದಲ್ಲಿ 1 ಸೇರಿ ಇಂದು 5 ಪ್ರಕರಣ ಪತ್ತೆಯಾಗಿವೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 292 ಕೊರೊನಾ ಪ್ರಕರಣ ದಾಖಲಾಗಿದೆ.