ಸಕಲೇಶಪುರ: ಪಟ್ಟಣದ ಚಪ್ಪಲಿ ಅಂಗಡಿ ಮಾಲೀಕನೊಬ್ಬನ ಹೆಂಡತಿಗೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತದ ವತಿಯಿಂದ ಮಾಲೀಕನ ಮನೆ ಹಾಗೂ ಅಂಗಡಿ ಸೀಲ್ ಡೌನ್ ಮಾಡಲಾಗಿದೆ.
ಸೋಂಕಿತೆ 40 ವರ್ಷದ ಮಹಿಳೆಯಾಗಿದ್ದು, ಬೆಂಗಳೂರಿನಿಂದ ಹಾಸನದಲ್ಲಿರುವ ತಾಯಿ ಮನೆಗೆ ಹಿಂತಿರುಗಿದ್ದರು. ಜ್ವರದ ಕಾರಣ ಹಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಕೊರೊನಾ ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಮಲ್ಲಿಕಾರ್ಜುನ ನಗರ ಬಡಾವಣೆಯಲ್ಲಿರುವ ವರ್ತಕನ ಮನೆ ಸೀಲ್ ಡೌನ್ ಮಾಡಲಾಗಿದ್ದು, ಮನೆಯ ಸುತ್ತಮುತ್ತ 50 ಮೀಟರ್ನಷ್ಟು ವ್ಯಾಪ್ತಿಯಲ್ಲಿ ಯಾರೂ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಪತ್ನಿಗೆ ಸೊಂಕು ಕಾಣಿಸಿರುವುದು ದೃಢವಾಗಿದ್ದು, ಪತಿಯ ಸ್ವ್ಯಾಬ್ ಟೆಸ್ಟ್ ಆಗಬೇಕಾಗಿದೆ.
ಪಟ್ಟಣದಲ್ಲಿ ಅಂಗಡಿ ಸೀಲ್ ಡೌನ್ ಮಾಡಿರುವುದರಿಂದ ಸುತ್ತಮುತ್ತಲಿನ ವರ್ತಕರಿಗೆ ಆತಂಕ ಉಂಟಾಗಿದೆ. ಪಟ್ಟಣದ ಮಲ್ಲಿಕಾರ್ಜುನ ನಗರ ಬಡಾವಣೆಗೆ ಆಗಮಿಸಿದ್ದ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ತಹಶೀಲ್ದಾರ್ ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಮಹೇಶ್ ಸ್ಥಳ ಪರಿಶೀಲಿಸಿ ವರ್ತಕನಿಗೆ ಧೈರ್ಯ ತುಂಬಿದ್ದಾರೆ.