ಹಾಸನ: ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಜಿಲ್ಲೆಯ ಜನತೆ ಮಾತ್ರ ಕೊರೊನಾಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಓಡಾಡುತ್ತಿದ್ದಾರೆ.
45 ದಿನಗಳ ಕಾಲ ಹಸಿರು ವಲಯದಲ್ಲಿದ್ದ ಜಿಲ್ಲೆಗೆ ದೂರದ ಮುಂಬೈನಿಂದ ಜನ ಆಗಮಿಸಿದ್ದರಿಂದ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಜನ ಮಾತ್ರ ಎಂದಿನಂತೆ ತಮ್ಮ ವ್ಯಾಪಾರ ವಹಿವಾಟು, ದಿನನಿತ್ಯದ ಚಟುವಟಿಕೆಗಳ ನಡುವೆ ಬ್ಯುಸಿಯಾಗಿದ್ದಾರೆ. ಇವತ್ತು ಮತ್ತೆ ಜಿಲ್ಲೆಯಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ 253ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸುಮಾರು 192 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 60 ಮಂದಿ ಜಯಚಾಮರಾಜೇಂದ್ರ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವತ್ತು ಅರಸೀಕೆರೆ ತಾಲೂಕಿನಲ್ಲಿ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಉಳಿದ ಮೂರು ಪಾಸಿಟಿವ್ ಪ್ರಕರಣ ಮುಂಬೈನಿಂದ ಬಂದವರಲ್ಲಿ ಪತ್ತೆಯಾಗಿದೆ. ಇದರ ನಡುವೆಯೇ ಇವತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಎಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆಯೋ ಎಂಬ ಆತಂಕ ಕೂಡ ಮನೆ ಮಾಡಿದೆ. ಈಗಾಗಲೇ ಕೊರೊನಾಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.