ಸಕಲೇಶಪುರ: ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳಿಂದ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆಂದು ಕಾಂಗ್ರೆಸ್ ಮುಖಂಡ ಬಿ.ಸಿದ್ದಯ್ಯ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಸರ್ಕಾರದ ಜನ ವಿರೋಧಿಗಳನ್ನು ವಿರೋಧಿಸಿ ತಾಲೂಕು ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಬಿಜೆಪಿ ಸರ್ಕಾರವು ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದೆ. ಮನುಕುಲವನ್ನೇ ಆತಂಕಗೀಡು ಮಾಡಿರುವ ಕೋವಿಡ್-19 ವೈರಾಣು ನಿಯಂತ್ರಣ ಕಾರ್ಯಕ್ರಮದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂದು ದೂರಿದರು.
ರಾಜ್ಯದ ಬಹುಭಾಗವನ್ನು ಬಾಧಿಸುತ್ತಿರುವ ಅತಿವೃಷ್ಟಿಗೆ ಪರಿಹಾರ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರೈತ ವಿರೋಧಿ ಭೂಸುಧಾರಣಾ ತಿದ್ದುಪಡಿ, ಎ.ಪಿ.ಎಂ.ಸಿ.ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ, ಕೈಗಾರಿಕಾ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ತಕ್ಷಣ ವಾಪಸ್ ತೆಗೆದುಕೊಳ್ಳಬೇಕು ಎಂದರು.
ಕೊರೊನಾ ನಿಯಂತ್ರಣ ಕಾರ್ಯಕ್ರಮದಲ್ಲಿ ನಡೆದ ವ್ಯಾಪಕ ಭ್ರಷ್ಟಚಾರದ ವಿಷಯದಲ್ಲಿ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಈ ಜನಧ್ವನಿ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದ ಅಂಗವಾಗಿ ಹಳೇ ಬಸ್ ನಿಲ್ದಾಣದಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆಯಲ್ಲಿ ಸಾಗಿ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಕೊಲ್ಲಹಳ್ಳಿ ಸಲೀಂ, ಟಿಎಪಿಸಿಎಮ್‌ಎಸ್ ಅಧ್ಯಕ್ಷ ಲೋಹಿತ್ ಕೌಡಹಳ್ಳಿ ಸೇರಿದಂತೆ ಮುಂತಾದವರು ಹಾಜರಿದ್ದರು.