ಹಾಸನ: ರಾಜರತ್ನಂ ಮ್ಯಾಚ್ ಇಂಡಸ್ಟ್ರೀಸ್ ಆಸ್ತಿಯನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿರುವ ನೋಂದಣಾಧಿಕಾರಿ ಮಧುರವರನ್ನು ಕೂಡಲೇ ವರ್ಗಾವಣೆ ಮಾಡಿ, ಶಾಸಕರ ವಂಚನೆ ಪ್ರಕರಣವನ್ನು ಸರ್ಕಾರ ಉನ್ನತ ಮಟ್ಟದಲ್ಲಿ ತನಿಖೆ ಮಾಡಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ನೋಂದಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಶಾಸಕ ಪ್ರೀತಂ ಜೆ.ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ನೋಂದಣಾಧಿಕಾರಿ ಮಧು ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡುವಂತೆ ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಮಹೇಶ್ ಆಗ್ರಹಿಸಿದರು.
ಶಾಸಕ ಪ್ರೀತಂ ಜೆ.ಗೌಡ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ರಾಜರತ್ನಂ ಮ್ಯಾಚ್ ಇಂಡಸ್ಟ್ರೀಸ್ ಅನ್ನು ಖರೀದಿಸಿದ್ದಾರೆ. ಇದರ ಮಾರುಕಟ್ಟೆ ಬೆಲೆ 30 ಕೋಟಿಗಿಂತ ಅಧಿಕವಾಗಿದ್ದು, 15 ಕೋಟಿ ರೂ.ಗಳ ಸಬ್ ರಿಜಿಸ್ಟ್ರಾರ್ ಶುಲ್ಕವನ್ನು ಕಟ್ಟದೆ ಅಧಿಕಾರಿಗಳಿಗೆ ಒತ್ತಡ ತಂದು ಹೆದರಿಸಿ, ಬೆದರಿಸಿ ಸರ್ಕಾರ ನಿಗದಿ ಮಾಡಿರುವ ಬೆಲೆಗಿಂದ ಅರ್ಧದಷ್ಟು ಅಂದರೆ, 7 ಕೋಟಿಯನ್ನು ವಂಚಿಸಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕೋಟಿ ಒಡೆಯನಾಗಿದ್ದನ್ನು ಬಹಿರಂಗಪಡಿಸಬೇಕು :
ನೂರಾರು ಕೋಟಿ ಆಸ್ತಿ ಖರೀದಿಗೆ ಪ್ರೀತಂ ಗೌಡರಿಗೆ ಹಣ ಎಲ್ಲಿಂದ ಬಂತು? ಹಾಸನದ ಸರ್ಕಾರಿ ನೌಕರರಿಂದ ವಸೂಲಿ ಮಾಡಿದ ಅಥವಾ ಕೆಐಎಡಿಬಿ ಪ್ರದೇಶದ ಉದ್ಯಮಗಳಲ್ಲಿ ವಸೂಲಿ ಮಾಡಿದ ಹಣವೋ, ಆರ್ಟಿಒ ಕಚೇರಿಯಿಂದ ಹೆದರಿಸಿ ವಸೂಲಿ ಮಾಡಿದ ಹಣವೋ, ವರ್ಗಾವಣೆ ಮಾಡಿಸಿದ ಹಿನ್ನೆಲೆಯಿಂದ ಬಂದ ಲಂಚದ ಹಣವೋ ಎಂಬುದನ್ನು ಬಹಿರಂಗಪಡಿಸಿ ಸಾರ್ವಜನಿಕರಿಗೆ ತಿಳಿಸಬೇಕೆಂದು ಸವಾಲು ಹಾಕಿದರು. ಸರ್ಕಾರ ನಿಗಧಿ ಮಾಡಿದ ಬೆಲೆಗಿಂತ 7 ಕೋಟಿ ರೂ.ಕಡಿಮೆ ಬೆಲೆಗೆ ನೋಂದಾಯಿಸುವ ವಿಚಾರದಲ್ಲಿ ಇಲ್ಲಿರುವ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳಾದ ಮಧು ಮತ್ತು ಇತರರು ಶಾಮಿಲಾಗಿರುವುದು ಶಾಸಕರ ಜೊತೆ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ದೂರಿದರು.
ನೋಂದಣಾಧಿಕಾರಿ ಮಧುರವರನ್ನು ಅಮಾನತು ಮಾಡಿ:
ಬಡವರಿಗೊಂದು, ಶ್ರೀಮಂತರಿಗೊಂದು ಮತ್ತು ರಾಜಕಾರಣಿಗೊಂದು ನ್ಯಾಯ ಅಲ್ಲ. ಇದು ಎಲ್ಲರಿಗೂ ಸಮನಾದ ನ್ಯಾಯ ಸಿಗಬೇಕು. ಶಾಸಕರು ಒಂದು ವರ್ಷದಲ್ಲೇ ನೂರಾರು ಕೋಟಿ ರೂ.ಗಳ ಆಸ್ತಿ ಮಾಡಿರುವುದಾಗಿ ಜನರು ಮಾತನಾಡುತ್ತಿರುವುದು ಸುಳ್ಳಲ್ಲ. ಕಚೇರಿಗೆ ನಿಗದಿತ ನ್ಯಾಯಯುತವಾದ ಹಣವನ್ನು ಸಂದಾಯವಾಗಬೇಕು. ಸಬ್ ರಿಜಿಸ್ಟ್ರಾರ್ ಅಧಿಕಾರಿ ಮಧು ಎನ್ನುವ ವ್ಯಕ್ತಿ ಶಾಸಕರ ಜೊತೆ ಸೇರಿ ಹಣವನ್ನು ದೋಚಿದ್ದಾರೆ ಎಂದು ಆರೋಪಿಸಿದರು. ಇಂತಹ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ನಿರಂತರ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಹೆಚ್.ಪಿ. ಪುಟ್ಟರಾಜು, ಶಂಕರರಾಜು, ನರಸಿಂಹ, ಆರಿಫ್, ಅಸ್ಲಾಂ ಪಾಷ, ಕಹಿಂ, ಚಂದ್ರಶೇಖರ್, ರಾಘವೇಂದ್ರ ಇತರರು ಪಾಲ್ಗೊಂಡಿದ್ದರು.