ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ದೇಗುಲದ ಬಾಗಿಲು ಮುಚ್ಚುವ ವಿಚಾರದಲ್ಲೀಗ ಗೊಂದಲ ಶುರುವಾಗಿದೆ.
ಬಲಿಪಾಡ್ಯಮಿಯ ಮಾರನೇ ದಿನ ದೇಗುಲದ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚದೆ ದೀಪಾವಳಿ ದಿನದಂದೇ ಬಾಗಿಲು ಹಾಕುವ ಮೂಲಕ ದೇವಿಗೆ ಅಪಚಾರ ಮಾಡ್ತಿದ್ದಾರೆಂದು ಮೂಲ ಅರ್ಚಕರ ಸಮುದಾಯದವರಿಂದ ಆರೋಪ ಕೇಳಿ ಬಂದಿದೆ.
ಹಾಸನಾಂಬೆಗೆ ವರ್ಷದ ಹಿಂದೆ ಹಚ್ಚಿಟ್ಟ ದೇವಿಯ ದೀಪ ನಿರಂತರವಾಗಿ ಉರಿಯುತ್ತಲೇ ಇರುತ್ತದೆ. ಪ್ರತಿ ವರ್ಷ ಆಶ್ವಿಜ ಮಾಸದ ಮೊದಲ ಗುರುವಾರ ದೇವಾಲಯದ ಬಾಗಿಲು ತೆರೆದರೆ ಬಲಿಪಾಡ್ಯಮಿಯ ಮಾರನೇ ದಿನ ದೇಗುಲದ ಬಾಗಿಲನ್ನು ಮುಚ್ಚಲಾಗುತ್ತದೆ. ವರ್ಷಕ್ಕೊಮ್ಮೆ ಬಾಗಿಲು ತೆರೆಯುವುದರಿಂದ ಭಕ್ತಗಣ ಕೂಡಾ ಲಕ್ಷೋಪಾದಿಯಲ್ಲಿ ಬಂದು ದೇವರ ದರ್ಶನ ಪಡೆಯುತ್ತಾರೆ. ಆದ್ರೆ ಈ ಬಾರಿ ಕೋವಿಡ್ ಹಿನ್ನೆಲೆ ಭಕ್ತರಿಗೆ ದೇವಿ ದರ್ಶನದ ಭಾಗ್ಯವಿಲ್ಲ. ಇದ್ರ ನಡುವೆ ಸ್ವಾಗತ ಕಮಾನು ಎರಡು ಬಾರಿ ಮುರಿದು ಬಿದ್ದಿದೆ. ಇಷ್ಟೆಲ್ಲಾ ಸಮಸ್ಯೆ ತಿಳಿದಿದ್ದರೂ ಕೂಡ ಹಾಲಿ ಅರ್ಚಕರು ದೇವಿಯ ಸಂಪ್ರದಾಯ ತಿಳಿಯದೆ ಅಪಚಾರ ಮಾಡಲು ಹೊರಟಿದ್ದಾರೆಂದು ಆರೋಪಿಸಿದ್ದಾರೆ.
ಏನಿದು ಪ್ರಕರಣ: ತಲಾ ತಲಾಂತರದಿಂದ ದೇವಿಯ ಪೂಜೆ ನೆರವೇರಿಸಿಕೊಂಡು ಬರುತ್ತಿರುವ ಮೂಲ ಅರ್ಚಕರ ಕುಟುಂಬ ಆಶ್ವಿಜ ಮಾಸದ ಮೊದಲ ಗುರುವಾರ ಬಾಗಿಲು ತೆರೆದು, ಬಲಿಪಾಢ್ಯಮಿಯ ಮಾರನೇ ದಿನ ದೇವಿಯ ಅಂದರೆ ಕೊನೆಯ ದರ್ಶನದ ಬಳಿಕ ಬಾಗಿಲು ಹಾಕಲಾಗುತ್ತದೆ. ಆದ್ರೆ ಈ ಬಲಿಪಾಡ್ಯಮಿ ಮಿಯ ಮಾರನೇ ದಿನ ದೇವಿಯ ಬಾಗಿಲು ಹಾಕದೆ ಅಮವಾಸ್ಯೆಯ ದಿನವೇ ಮಗಾರ ಸಂಪ್ರದಾಯವನ್ನು ಕಾಟಚಾರಕ್ಕೆ ಮಾಡಿ, ದೀಪಾವಳಿಯ ದಿನ ಬಾಗಿಲು ಹಾಕಲಾಗುತ್ತಿರುವುದು ಮುಂದಿನ ಬಾರಿಯ ದೀಪ ಉರಿಯುವಿಕೆಗೆ ಅಪಚಾರವಾಗಬಹುದು ಅಥವಾ ದೇಶಕ್ಕೆ ಕೊರೊನಾ ರೀತಿಯ ಮತ್ತೊಂದು ಕಂಟಕ ಎದುರಾಗಬಹುದು ಎಂಬ ಆತಂಕ ಮನೆ ಮಾಡಿದೆ.
ಒಂಟಿಕೊಪ್ಪಲು ಪಂಚಾಂಗದ ಪ್ರಕಾರ ಮಂಗಳವಾರವೇ ಬಾಗಿಲು ಹಾಕಬೇಕು:
ಮೈಸೂರು ಒಂಟಿಕೊಪ್ಪಲು ಪಂಚಾಂಗವನ್ನು ರಾಜ್ಯದ ಜನತೆಯಷ್ಟೇ ಅಲ್ಲದೇ ಹೊರ ಜಿಲ್ಲೆಯ ಜನರು ಬಳಸುತ್ತಿದ್ದು, ಅದರ ಪ್ರಕಾರವೇ ಈ ಬಾರಿಯ ದೇವಿಯ ಬಾಗಿಲನ್ನು ತೆರೆಯಲಾಗಿದೆ. ಆದ್ರೆ ಚಂದ್ರದರ್ಶನದ ದಿನ ಹಾಸನಾಂಬ ದೇವಿಯ ಆವರಣದಲ್ಲಿ, ಚಂದ್ರಮಂಡಲೋತ್ಸವ ಮತ್ತು ಸಿದ್ದೇಶ್ವರ ಜಾತ್ರೆ ನಡೆಯುತ್ತದೆ. ಈ ಕಾರ್ಯಕ್ರಮ ಜರುಗಿದ ಮಾರನೇ ದಿನ ಸೂರ್ಯೋದಯದ ಮುನ್ನವೇ ಕೆಂಡೋತ್ಸವ ನೆರವೇರುತ್ತದೆ. ಬಳಿಕ ಮಧ್ಯಾಹ್ನ ಜಿಲ್ಲಾಡಳಿತದ ಸಮ್ಮುಖದಲ್ಲಿ ಮುತ್ತೈದೆಯರ ಪೂಜೆಯಾದ ನಂತರ ದೇವಾಲಯದ ಬಾಗಿಲನ್ನು ಸಂಪ್ರದಾಯದ ಪ್ರಕಾರ ಶಾಸ್ತ್ರಗಳ ಮೂಲಕ ಬಾಗಿಲನ್ನು ಮುಚ್ಚಲಾಗುತ್ತದೆ.
ಆದ್ರೆ ಈ ಬಾರಿ ಹಾಲಿ ಅರ್ಚಕರು ತಿಳುವಳಿಕೆಯಿಲ್ಲದೆ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ಮಂಗಳವಾರ ಬಾಗಿಲನ್ನು ಹಾಕಲಾಗುವುದು ಎಂದು ಆಹ್ವಾನ ಪತ್ರಿಕೆಯಲ್ಲಿ ನಮೂದಿಸಿ ಸೋಮವಾರವೇ ಬಾಗಿಲು ಹಾಕುವ ನಿರ್ಧಾರದ ಮೂಲಕ ದೇವಿಗೆ ಅಪಚಾರ ಮಾಡ್ತಿದ್ದಾರೆ ಎಂದು ಮೂಲ ಅರ್ಚಕರು ಆರೋಪಿಸಿದ್ದಾರೆ. ಜೊತೆಗೆ ಸಂಪ್ರದಾಯದ ಪ್ರಕಾರವೇ ದೇವಾಲಯದ ಬಾಗಿಲನ್ನು ಮಂಗಳವಾರ ಹಾಕಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.