ಹಾಸನ (ಅರಸೀಕೆರೆ): ಅಭಿವೃದ್ಧಿ ಎಂದರೆ ಕೇವಲ ಕಾಂಕ್ರೆಟ್ ರಸ್ತೆ ನಿರ್ಮಿಸಿ, ಕಮಿಷನ್ ಪಡೆದು ಗಂಟೆಗಟ್ಟಲೆ ವಿಧಾನಸಭೆಯಲ್ಲಿ ಭಾಷಣ ಮಾಡಿ ಸೈ ಎನಿಸಿಕೊಳ್ಳುವುದಲ್ಲ. ತಮ್ಮ ಕ್ಷೇತ್ರದ ಪ್ರತಿ ಹಳ್ಳಿಗಳ ಸಮಸ್ಯೆಯನ್ನು ಅರಿಯುವ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸುವುದು ಕ್ಷೇತ್ರದ ಶಾಸಕರ ಕರ್ತವ್ಯ ಎಂದು ಮುಖ್ಯಮಂತ್ರಿ ರಾಜಕೀಯ ಆಪ್ತ ಕಾರ್ಯದರ್ಶಿ ಎನ್ ಆರ್ ಸಂತೋಷ್ ಕುಮಾರ್ ಹೇಳಿದರು.
1952ರಿಂದ ಬಿಜೆಪಿ ಅಧಿಕಾರ ಪಡೆಯಲು ಸಾಧ್ಯವಾಗಿರಲಿಲ್ಲ. 2004ರಲ್ಲಿ ಒಮ್ಮೆ ಬಿಜೆಪಿ ಅಧಿಕಾರ ಪಡೆದದ್ದನ್ನು ಬಿಟ್ಟರೆ ಮತ್ತೆ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ, ಅರಸೀಕೆರೆ ಅಭಿವೃದ್ಧಿ ಮಾಡುವಲ್ಲಿ ಬಿಜೆಪಿ ಹಿಂದೆಬಿದ್ದಿಲ್ಲ. ಸಿಎಂ ಯಡಿಯೂರಪ್ಪನವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಈ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇಲ್ಲದಿದ್ದರೂ ಕೂಡ ನೀರಾವರಿ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದರು. ಈಗ ಮತ್ತೆ ಮುಖ್ಯಮಂತ್ರಿಯಾಗಿರುವುದು ಕ್ಷೇತ್ರದ ಜನರ ಸೌಭಾಗ್ಯ.
ಅರಸೀಕೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಮತ್ತು ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಬಲಪಡಿಸಲು ನನಗೆ ಒಂದು ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಪ್ರಾಮಾಣಿಕತೆಯಿಂದ ಸೇವೆ ಮಾಡಲು ನಾನು ಸಿದ್ಧನಿದ್ದೇನೆ ಎಂದರು. ಅರಸೀಕೆರೆ ಕ್ಷೇತ್ರದಲ್ಲಿ ಪ್ರಮುಖವಾಗಿ ಕಾಡುವ ದೊಡ್ಡ ಸಮಸ್ಯೆಯೆಂದರೆ ಅದು ನೀರಾವರಿ ಸಮಸ್ಯೆ. ಈಗಾಗಲೇ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದ್ದು, ಇತರ ಮೂಲಗಳಿಂದ ಕುಡಿಯುವ ಮತ್ತು ಕೃಷಿಗೆ ಬೇಕಾಗುವತಂಹ ನೀರನ್ನ ಇತರೇ ಮೂಲಗಳಿಂದ ತರಬಹುದಾ ಎಂಬ ಯೋಜನೆಯನ್ನ ಮುಂದಿಟ್ಟುಕೊಂಡು ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ.
ಈ ಬಾರಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಅರಸೀಕೆರೆ ಕ್ಷೇತ್ರದ ಜನತೆಯ ಸಂಕಷ್ಟ ಮುಂದಿನ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಮುಖ್ಯಮಂತ್ರಿಗಳು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಾರೆ ಎಂದು ಭರವಸೆ ನೀಡಿದರು. ನಮ್ಮ ಸರ್ಕಾರದಲ್ಲಿ ಬಂಜಾರ ಮತ್ತು ಭೋವಿ ಜನಾಂಗದ ಮಂತ್ರಿಗಳು ಕೂಡ ಇರುವುದು ವಿಶೇಷ. ಎಲ್ಲಾ ವರ್ಗದವರನ್ನು ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶ ಬಿಜೆಪಿಯದ್ದಾಗಿದೆ. ಜಾತಿ ಭೇದವಿಲ್ಲದೆ ಎಲ್ಲಾ ಜನಾಂಗದವರಿಗೂ ಅವಕಾಶ ಕೊಟ್ಟಿರುವ ಏಕೈಕ ಪಕ್ಷ ಬಿಜೆಪಿ. ಮುಂದಿನ ದಿನಗಳಲ್ಲಿ ಅರಸೀಕೆರೆ ಕ್ಷೇತ್ರಕ್ಕೆ ಬಿಜೆಪಿ ಶಾಸಕರೊಬ್ಬರನ್ನ ಆಯ್ಕೆ ಮಾಡುವ ಮೂಲಕ ಮುಂದಿನ ಬಾರಿಯೂ ಯಡಿಯೂರಪ್ಪನವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.