ಮಂಡ್ಯ: ಹಾಸನದ ಅರಸೀಕೆರೆ ತಾಲೂಕಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಈ ಘಟನೆ ನಡೆದಿರುವುದು ದುರಾದೃಷ್ಟಕರ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಉಸ್ತುವಾರಿ ಸಚಿವರು ಕುಂಭಮೇಳ ಸಮಾರೋಪ ಮುಗಿಸಿ ಹಾಸನಕ್ಕೆ ತೆರಳಿ ಪರಿಸ್ಥಿತಿ ನಿರ್ವಹಣೆ ಮಾಡಲಿದ್ದಾರೆ ಎಂದು ಸಿಎಂ ಹೇಳಿದರು.
ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹೇಳಿರುವುದು ಯಾವುದು ನಿಜವಾಗಿಲ್ಲ. ಕಳೆದ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೀವಿ ಅಂದ್ರು. ಆದ್ರೆ 79 ಸೀಟ್ ಮಾತ್ರ ಪಡೆದುಕೊಂಡ್ರು. ಯಡಿಯೂರಪ್ಪ ಸಿಎಂ ಆಗಲ್ಲ ಎಂದ್ರು. ಆದ್ರೆ ಒಂದೇ ಅವಧಿಯಲ್ಲಿ ಅವರು ಮುಖ್ಯಮಂತ್ರಿಯಾದರು. ಹೀಗಾಗಿ ಸಿದ್ದರಾಮಯ್ಯ ಹೇಳುವುದು ಯಾವುದು ನಿಜವಾಗಲ್ಲ ಎಂದು ಎಂದು ಟಾಂಗ್ ಕೊಟ್ಟರು.
ರಾಹುಲ್ ಗಾಂಧಿ ಹೇಳಿಕೆಗೆ ಸಿಎಂ ತಿರುಗೇಟು: ಕಾಸಿದ್ದವರಿಗೆ ಮಾತ್ರ ಕರ್ನಾಟಕದಲ್ಲಿ ಪದವಿ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಾಲದಲ್ಲಿ ಎಂತಹ ಹಗರಣಗಳು ಆದವು ಎಂಬುದನ್ನು ರಾಹುಲ್ ಗಾಂಧಿ ಮರೆತಂತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಕಾನ್ಸ್ಟೇಬಲ್ ನೇಮಕಾತಿ ಅಕ್ರಮ ಸೇರಿ ಹಲವು ಹಗರಣಗಳ ಬಗ್ಗೆ ದಾಖಲಾತಿ ಸಂಗ್ರಹಿಸಲಾಗಿದೆ.
ಇದನ್ನೂ ಓದಿ: ಹಾಸನ ಬಳಿ ಭೀಕರ ಅಪಘಾತಕ್ಕೆ 9 ಮಂದಿ ಸಾವು: 5-6 ಕಿಮೀ ಸಾಗಿದ್ರೆ ಮನೆ ಸೇರ್ತಿದ್ದ ಕುಟುಂಬದ ಮೇಲೆ ಜವರಾಯನ ಅಟ್ಟಹಾಸ
ಎಲ್ಲಾ ದಾಖಲಾತಿಗಳನ್ನ ರಾಹುಲ್ ಗಾಂಧಿಗೆ ಕಳುಹಿಸಿಕೊಡುತ್ತೇನೆ. ಇದೆಲ್ಲದರ ಬಗ್ಗೆ ತನಿಖೆ ಮುಂದುವರೆದಿದೆ. ಅದನ್ನ ನೋಡಿ ರಾಹುಲ್ ಗಾಂಧಿ ಮಾತನಾಡಲಿ ಎಂದು ಸಿಎಂ ಕಿಡಿಕಾರಿದರು.