ಹಾಸನ: ಲಾಕ್ಡೌನ್ ನಡುವೆಯೂ ಬಾಗಿಲು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದ ಬಟ್ಟೆಯಂಗಡಿಯೊಂದನ್ನ ಪೊಲೀಸರು ಲಾಕ್ ಮಾಡಿರೋ ಘಟನೆ ಹಾಸನದಲ್ಲಿ ನಡೆದಿದೆ.
ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿರುವ ದಿನೇಶ್ ಕ್ಲಾತ್ ಸೆಂಟರ್ನಲ್ಲಿ ಇಂದು ಬೆಳಗ್ಗೆ ಅಂಗಡಿ ತೆರೆದು 50ಕ್ಕೂ ಹೆಚ್ಚು ಮಂದಿ ಗ್ರಾಹಕರು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಬಟ್ಟೆಯಂಗಡಿಯಲ್ಲಿದ್ದ ಸುಮಾರು 50ಕ್ಕೂ ಅಧಿಕ ಮಂದಿಯನ್ನ ಹೊರ ಕಳುಹಿಸಿ ಬಟ್ಟೆಯಂಗಡಿಗೆ ಬೀಗ ಹಾಕಿದ್ದಾರೆ.
ಇನ್ನು ಈ ಬಟ್ಟೆಯಂಗಡಿ ರಾಜಸ್ಥಾನ ಮೂಲದ ಪ್ರಕಾಶ್ ಜೈನ್ ಎಂಬುವರಿಗೆ ಸೇರಿದ್ದು ಎನ್ನಲಾಗಿದೆ. ಅಲ್ಲದೇ ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದು, ಇತರರಿಗೆ ಮಾದರಿಯಾಗಬೇಕಾದವರೇ ನಿಯಮ ಉಲ್ಲಂಘಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಬಟ್ಟೆಯಂಗಡಿಯಲ್ಲಿ ವ್ಯಾಪಾರ ಮಾಡುವ ವೇಳೆ ಮಾಸ್ಕ್ ಸೇರಿದಂತೆ ಸ್ಯಾನಿಟೈಸರ್ ಬಳಕೆ ಮಾಡದೆ ನಿಯಮ ಉಲ್ಲಂಘಿಸಿದ್ದು, ಇವರ ವಿರುದ್ಧ ಸಾರ್ವಜನಿಕರು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.