ಹಾಸನ: 95 ವರ್ಷಗಳ ಇತಿಹಾಸ ಹೊಂದಿದ್ದ ಚನ್ನರಾಯಪಟ್ಟಣ ತಾಲೂಕಿನ ಬರಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ದಾಖಲಾತಿ ಕೊರತೆಯಿಂದಾಗಿ ಮುಚ್ಚಿದ್ದು, ಗ್ರಾಮಸ್ಥರ ಹಾಗೂ ಎನ್ಜಿಒ ಶ್ರಮದ ಫಲವಾಗಿ ಮತ್ತೆ ಬಾಗಿಲು ತೆರೆದಿದೆ.
ದಾಖಲಾತಿ ಕೊರತೆಯಿಂದಾಗಿ ಕಳೆದೊಂದು ವರ್ಷದಿಂದ ಶಾಲೆಗೆ ಬೀಗ ಹಾಕಲಾಗಿತ್ತು. ಪಕ್ಕದೂರಿನ ಶಾಲೆಗೆ ಮಕ್ಕಳು 2 ಕಿ.ಮೀ. ನಡೆದು ಹೋಗಬೇಕಾಗಿತ್ತು. ಈಗ ಆ ಶಾಲೆ ಪುನರಾರಂಭವಾಗಿದ್ದು, ಗ್ರಾಮಸ್ಥರು ಹಾಗೂ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿದೆ.
ಕಲ್ಪತರು ಗ್ರಾಮೀಣಾಭಿವೃದ್ಧಿ ಸಂಸ್ಥೆ ಶಾಲೆ ಪುನಃ ಆರಂಭಿಸಲು ಸಾಕಷ್ಟು ಶ್ರಮವಹಿಸಿದ್ದಾರೆ. ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ, ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸುವಂತೆ ಪೋಷಕರ ಮನವೊಲಿಸಿದ್ದಾರೆ. ಪರಿಣಾಮ ಶೂನ್ಯ ದಾಖಲಾತಿ ಹೊಂದಿದ್ದ ಶಾಲೆಯಲ್ಲಿ ಮೊದಲನೇ ದಿನವೇ ಆರು ಮಕ್ಕಳು ದಾಖಲಾಗಿದ್ದಾರೆ. ತಿಂಗಳಾಂತ್ಯದ ವೇಳೆಗೆ ಸುಮಾರು 30 ರಿಂದ 40 ಮಕ್ಕಳನ್ನು ದಾಖಲಿಸಿಕೊಳ್ಳುವ ಇರಾದೆ ಶಿಕ್ಷಕರು ಹೊಂದಿದ್ದಾರೆ. ಖಾಸಗಿ ಶಾಲೆಯಲ್ಲಿ ಲಭ್ಯವಾಗುವಂತಹ ಶಿಕ್ಷಣ ಒದಗಿಸುವ ಪ್ರಯತ್ನ ಮಾಡುತ್ತೇವೆ ಎನ್ನುತ್ತಾರೆ ಶಾಲಾ ಶಿಕ್ಷಕರು.
ಶಾಲೆ ಮತ್ತೆ ತೆರೆದಿದ್ದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಜನರ ಹಾಗೂ ಎನ್ಜಿಒ ಇಚ್ಛಾಶಕ್ತಿಯಿಂದ ಶಾಲೆ ಪುನರ್ ಆರಂಭವಾಗಿದೆ ಎನ್ನುತ್ತಾರೆ ಅಕ್ಷರ ದಾಸೋಹ ಅಧಿಕಾರಿ ಕೆ. ಶಾರದಾ.
ವರ್ಷಗಳ ಬಳಿಕ ಆರಂಭವಾದ ಶಾಲೆಯನ್ನು ಮತ್ತೆ ಮುಚ್ಚದಂತೆ ನೋಡಿಕೊಳ್ಳಬೇಕಾದ್ದು ಗ್ರಾಮಸ್ಥರ ಜವಬ್ದಾರಿ. ಸರ್ಕಾರದ ವತಿಯಿಂದ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇವೆ. ವರ್ಷದಿಂದ ವರ್ಷಕ್ಕೆ ಖಾಸಗಿ ಶಾಲೆಗಳು ಹೆಚ್ಚಾಗುತ್ತಿರುವುದರಿಂದ ಸರ್ಕಾರಿ ಶಾಲೆ ಬಾಗಿಲು ಮುಚ್ಚುತ್ತಿವೆ. ಖಾಸಗಿ ಶಾಲೆಯಲ್ಲಿ ಸಿಗುವಂತಹ ಸೌಕರ್ಯಗಳು ಸರ್ಕಾರಿ ಶಾಲೆಯಲ್ಲಿ ಸಿಗುವಂತಾಗಬೇಕು ಎಂದು ಎನ್ಜಿಇ ಪದಾಧಿಕಾರಿ ಸಾವಿತ್ರ ಶೆಟ್ಟಿಹಳ್ಳಿ ಮನವಿ ಮಾಡಿದರು.