ಹಾಸನ: ಕಳೆದ ಮೂರ್ನಾಲ್ಕು ತಿಂಗಳಿಂದ ಜನರ ನಿದ್ದೆಗೆಡಿಸಿದ್ದ ಹೆಣ್ಣು ಚಿರತೆ ಇಂದು ಬೆಳಗಿನಜಾವ ಬೋನಿಗೆ ಬಿದ್ದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಹಾಸನ ತಾಲೂಕಿನ ಸೋಮನಹಳ್ಳಿ ಕಾವಲಿನ ಬಳಿ ಕಳೆದ ಎರಡು ತಿಂಗಳ ಹಿಂದೆ ಮರಿಗಳೊಂದಿಗೆ ಚಿರತೆಗಳನ್ನು ಕಂಡಿದ್ದ ಜನರು ಸಂಜೆಯಾಗುತ್ತಿದ್ದಂತೆ ಕೃಷಿ ಕೆಲಸ ಮುಗಿಸಿ ಮನೆಗೆ ಸೇರುತ್ತಿದ್ದರು. ಈ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿ ಬೋನುಗಳನ್ನು ಇಡುವಂತೆ ಆಗ್ರಹಿಸಿದ್ದರು.
ಅಕ್ಟೋಬರ್ ಮೊದಲ ವಾರದಲ್ಲಿ ದುದ್ದ ಸಮೀಪದ ತೋಟವೊಂದರಲ್ಲಿ ಗಂಡು ಚಿರತೆಯೊಂದು ಸೆರೆಯಾಗಿತ್ತು. ಅದನ್ನು ಅರಣ್ಯಾಧಿಕಾರಿಗಳು ಮೈಸೂರಿನ ಮೃಗಾಲಯಕ್ಕೆ ಕಳಿಸಿದ್ದರು. ಈಗ ಅದೇ ಗ್ರಾಮದ ಸಮೀಪದಲ್ಲಿರುವ ಸೋಮನಹಳ್ಳಿ ಕಾವಲು ಬಳಿ ಬೋರೆ ಒಂದರ ಸಮೀಪ ಹೆಣ್ಣು ಚಿರತೆಯೊಂದು ಬೋನಿಗೆ ಬಿದ್ದಿದೆ.
ಇನ್ನು, ಬೋನಿಗೆ ಬಿದ್ದಿರುವ ಚಿರತೆಯನ್ನು ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕಾಡಂಚಿಗೆ ಬಿಡುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದು, ಚಿರತೆ ನೋಡಲು ಗ್ರಾಮದ ಸುತ್ತಮುತ್ತಲಿನ ಜನ ಮುಗಿಬಿದ್ದಿದ್ದಾರೆ.