ಚನ್ನರಾಯಪಟ್ಟಣ: ಪತಿಯೊಬ್ಬ ತನ್ನ ಪತ್ನಿಯನ್ನೇ ಮಚ್ಚಿನಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಗಂಡನಿಗೆ ಹೆಂಡತಿ ಮೇಲಿದ್ದ ಅನುಮಾನ ಕೊಲೆಯಲ್ಲಿ ಅಂತ್ಯಗೊಳ್ಳುವ ಮೂಲಕ ಹೆಣ್ಣು ಹೆತ್ತ ಮನೆಯವರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಆರೋಪಿ ಗಂಗಾಧರ್ (28) ತನ್ನ ಪತ್ನಿ ಪೂಜಾ (23)ಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ರಾಚೇನಹಳ್ಳಿಯಲ್ಲಿ ನಡೆದಿದೆ.
ಇದಕ್ಕೆ ಮುಖ್ಯ ಕಾರಣ ಆರೋಪಿ ಗಂಗಾಧರ್ನಿಗೆ ತನ್ನ ಹೆಂಡತಿ ಪೂಜಾಳ ಮೇಲಿದ್ದ ಅನುಮಾನ. ಆಕೆಗೆ ಇನ್ನೊಬ್ಬನೊಂದಿಗೆ ಸಂಬಂಧ ಇದೆ ಎಂಬ ಗಂಗಾಧರನ ಹುಚ್ಚು ಅನುಮಾನ ಈ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ನಿನ್ನೆ ತಡ ರಾತ್ರಿ ಈ ಘಟನೆ ನಡೆದಿದೆ. ಕೊಲೆಯಾದ ಪೂಜಾಳ ಸ್ವಂತ ಊರು ಹೊಳೆನರಸೀಪುರದ ಕುರಬರಹಳ್ಳಿ. ಪೂಜಾ ತಂದೆ ನಿಂಗೇಗೌಡ ಹಾಗೂ ತಾಯಿ ಸಾವಿತ್ರಿ 2014ರಲ್ಲಿ ಗಂಗಾಧರನಿಗೆ ಮದುವೆ ಮಾಡಿಕೊಟ್ಟಿದ್ದರು.
ಸದ್ಯ ಪೂಜಾಳ ಕೊಲೆಗೆ ಕಾರಣ ಗಂಗಾಧರ ನೀಡುತ್ತಿದ್ದ ವರದಕ್ಷಿಣೆ ಕಿರುಕುಳ, ಅನುಮಾನದಿಂದ ಆಕೆಗೆ ಹಿಂಸೆ ನೀಡುತ್ತಿದ್ದ ಎಂದು ಮೃತ ಪೂಜಾಳ ತಂಗಿ ಪೂರ್ಣಿಮಾ ಆರೋಪ ಮಾಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಗಂಗಾಧರ್ನನ್ನ ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಗಂಗಾಧರ್ ತನ್ನ ಪತ್ನಿ ಮೇಲಿನ ಅನುಮಾನಕ್ಕೆ ಮಾಡಿದ ಅಮಾನುಷ ಕೃತ್ಯಕ್ಕೆ ಈ ದಂಪತಿಯ ಆರು ವರ್ಷದ ಗಂಡು ಮಗು ಅನಾಥವಾಗಿದೆ.