ಹಾಸನ: ಕೊಬ್ಬರಿಗೆ ಸಹಾಯ ಧನವಿದೆ, ಆದರೆ ಬೆಂಬಲ ಬೆಲೆ ಇಲ್ಲ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು ಅಂತ ಶಾಸಕ ಶಿವಲಿಂಗೇಗೌಡ ಒತ್ತಾಯಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ ಕೊಬ್ಬರಿ ಬೆಲೆ ನಿಗದಿ ಮಾಡಿದ್ದು, ಅದೇ ರೀತಿ ರಾಗಿ ಖರೀದಿ ಕೂಡಾ ಆಗಿದೆ. ಆದ್ರೆ ಹಣ ಬರಬೇಕು. ಸ್ವಲ್ಪ ನಮ್ಮ ತಾಲೂಕಿನಲ್ಲಿ ಕೆಲವು ದಾಖಲಾತಿ ಕೊರತೆಯಿಂದ ಆಗಿದೆ. ಇನ್ನು ಕೆಲವರ ದುಡ್ಡು ಬರಬೇಕಾಗಿದೆ. ಏನಾದರೂ ಮಾಡಿ ಹಣವನ್ನು ತರುವ ಕೆಲಸ ಮಾಡುತ್ತೇನೆ. ರಾಗಿ ಹಣವನ್ನು ಇನ್ನೊಂದು ವಾರದಲ್ಲಿ ಕೊಡಿಸಲಾಗುವುದು ಎಂದರು.
ಕೊಬ್ಬರಿಗೆ ಬೆಂಬಲ ಬೆಲೆ ಕೊಟ್ಟಿಲ್ಲ. ಅದು ಸಹಾಯ ಧನ. ಬೆಂಬಲ ಬೆಲೆ ಕೊಡಬೇಕೆಂದು ನಾವು ಮೊದಲಿನಿಂದ ಹೇಳುತ್ತಾ ಬಂದಿದ್ದು, ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಬೇಕು. ಇದುವರೆಗೂ ಸಾವಿರ ರೂ. ಗಳಲ್ಲಿ ಯಾರೂ ಕೊಬ್ಬರಿಯನ್ನು ಮಾರಾಟ ಮಾಡಿಲ್ಲ. ಈಗ 1250 ರೂ. ಗಳನ್ನು ಕೊಟ್ಟಿದೆ. ಕಡಿಮೆ ಆಗಿದೆ ಎನ್ನುವುದಕ್ಕಿಂತ ಇದನ್ನು ಸರಿಪಡಿಸಬೇಕು. ಏನೇ ಇದ್ದರೂ ಕೇಂದ್ರವೇ ನಿಗದಿ ಮಾಡಬೇಕು, ಇಲ್ಲದೆ ಇದ್ದರೆ ನಾವು ಕೂಡ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕನಿಲ್ಲದಿರುವುದು ವಿಪರ್ಯಾಸ: ವಿಧಾನಸಭೆ ಮತ್ತು ವಿಧಾನ ಪರಿಷತ್ಗಳಲ್ಲಿ ಪ್ರತಿಪಕ್ಷ ನಾಯಕನಿಲ್ಲದಿರುವುದು ವಿಪರ್ಯಾಸ. ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ವಿಷಾದ ವ್ಯಕ್ತಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೇ ಮೇಲ್ಮನೆ & ಕೆಳಮನೆಯಲ್ಲಿ ರಾಷ್ಟ್ರೀಯ ಪಕ್ಷವಿದ್ದು, ಆ ಪಕ್ಷದ ನಾಯಕರನ್ನು ಆಯ್ಕೆ ಮಾಡದಿರುವುದು ವಿಪರ್ಯಾಸ. ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.
ಇದುವರೆಗೂ ನಾಯಕನನ್ನು ಯಾಕೆ ಆಯ್ಕೆ ಮಾಡಿಲ್ಲ ಎನ್ನುವುದನ್ನು ಬಿಜೆಪಿಯವರನ್ನೇ ಕೇಳಬೇಕು. ಅವರ ಪಕ್ಷದಲ್ಲಿ ಆಂತರಿಕ ಗೊಂದಲವಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡ್ತಿವಿ ಅಂತ ಹೇಳ್ತಾರೆ. ಆದ್ರೆ ನಾವೇನು ಬಿಜೆಪಿ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳಿಲ್ಲ. ಅದೊಂದು ಒಡೆದ ಮನೆಯಾಗಿದೆ. ಬಿಜೆಪಿ ಮುಂದಿನ ದಿನಗಳಲ್ಲಿ ತನ್ನ ಭವಿಷ್ಯವನ್ನು ಕಳೆದುಕೊಳ್ಳಲಿದೆ ಎಂದು ವ್ಯಂಗ್ಯವಾಡಿದ್ರು.
ರೈತರಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ: ನೋಡಿ, ನಮ್ಮಲ್ಲಿ ಗೊಂದಲ ಇದ್ರೆ ನಾವೆಲ್ಲರೂ ಒಟ್ಟಿಗೆ ಕುಳಿತು ಅದನ್ನ ಬಗೆಹರಿಸುವ ಕೆಲಸ ಮಾಡ್ತೀವಿ. ಆದರೆ ನಮ್ಮ ಮುಂದೆ ಇರುವುದು ಚುನಾವಣೆ ಪೂರ್ವ ನೀಡಿದ 5 ಗ್ಯಾರಂಟಿ ಭರವಸೆಯನ್ನು ಜಾರಿ ಮಾಡುವುದು. ಕಾಂಗ್ರೆಸ್ ಸರ್ಕಾರದ ಮೊದಲ ಆದ್ಯತೆ. ಕಾಂಗ್ರೆಸ್ ಪಕ್ಷ ಅಂದ್ರೆ ಅದು ರೈತ ಪಕ್ಷ. ರೈತರಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಅದನ್ನು ಮಾಡುತ್ತೇವೆ. ರಾಗಿ ಖರೀದಿ ಮಾಡಲಾಗಿದ್ದು, ಹಣ ಪಾವತಿ ವಿಚಾರದಲ್ಲಿ ಏನಾದರೂ ಗೊಂದಲವಾಗಿದ್ದರೆ ಅದನ್ನ ಸರಿಪಡಿಸಲಾಗುವುದು ಎಂದು ಹೇಳಿದರು.
ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆ ಆಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ಕೂಡ ಮಾಡಲಾಗಿದೆ. ಸರಿಯಾದ ಸಮಯಕ್ಕೆ ಮಳೆ ಬಾರದೆ ಇದ್ದರೆ ರೈತರಿಗೆ ಏನೆಲ್ಲಾ ಅನಾನೂಕಲವಾಗುತ್ತದೆ. ಪರಿಹಾರ ಕ್ರಮದ ಬಗ್ಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು? ಅದಕ್ಕೆ ಎಷ್ಟು ಹಣಕಾಸಿನ ಅಗತ್ಯತೆ ಇದೆ ಎಂಬುದರ ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗಾಗಲಿ ಹಾಗೂ ರೈತರಿಗೆ ಆಗಲಿ ಸಮಸ್ಯೆ ಆಗದ ರೀತಿಯಲ್ಲಿ ನೋಡಿಕೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಸನದ ಡಿಸಿಸಿ ಬ್ಯಾಂಕ್ ಅವ್ಯವಹಾರದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಆಧಾರದಲ್ಲಿ ಏನು ಕ್ರಮ ಜರುಗಿಸಬೇಕೋ ಆ ಕೆಲಸ ಮಾಡಲಾಗುವುದು. ಯಾವುದೇ ರೀತಿಯ ಅವ್ಯವಹಾರಗಳಿಗೆ ಅವಕಾಶ ಕೊಡದ ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿ, ಈ ತಿಂಗಳ 30ರ ಒಳಗೆ ಪ್ರಗತಿ ಪರಿಶೀಲನಾ ಸಭೆ ಮಾಡಲಾಗುವುದು. ಈ ವೇಳೆ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಹೊಂದಾಣಿಕೆ ಮಾಡಿಕೊಂಡ್ರು ಯಾವ ಫಲ ದೊರೆಯುವುದಿಲ್ಲ: ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಅಲ್ಲಿಂದ ಯಾವ ಫಲಿತಾಂಶ ಬಂದಿದೆ? ಈಗ ಹೊಂದಾಣಿಕೆ ಮಾಡಿಕೊಂಡ್ರು ಯಾವ ಫಲ ದೊರೆಯುವುದಿಲ್ಲ. ಇದು ನನ್ನ ಅನುಭವದ ಮಾತು ಎಂದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ?: ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಿಷ್ಟು.