ಹಾಸನ : ಚಲಿಸುತ್ತಿದ್ದ ಕಾರೊಂದು 30 ಅಡಿ ಗುಂಡಿಗೆ ಬಿದ್ದಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸಮೀಪ ನಡೆದಿದೆ. ಆಲೂರು ತಾಲೂಕಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 75ರ ಅವೈಜ್ಞಾನಿಕ ಕಾಮಗಾರಿಯಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗ್ತಿದೆ.
ಬೈರಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಕೆಳ ಅಂತಸ್ತಿನ ರಸ್ತೆ ಕಾಮಗಾರಿಗೆಂದು ಸುಮಾರು 30 ಅಡಿ ಆಳದ ಗುಂಡಿ ನಿರ್ಮಾಣ ಮಾಡಲಾಗಿದೆ. ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಮಂಜುನಾಥ್ ಎಂಬುವರು ಹಾಸನಕ್ಕೆ ಆಲೂರು ಮಾರ್ಗವಾಗಿ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಗುಂಡಿಯ ಮೇಲ್ಭಾಗದಿಂದ ಕೆಳಗೆ ಬಿದ್ದ ಪರಿಣಾಮ ಕಾರು ನುಜ್ಜುಗುಜ್ಜಾಗಿದೆ. ಇನ್ನು ಕಾರಿನ ಚಾಲಕ ಮಂಜುನಾಥ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಲೂರು ತಾಲೂಕಿನ ಬೈರಾಪುರದಲ್ಲಿ ಹಾಸನ, ಮಂಗಳೂರು, ಆಲೂರು ಹಾಗೂ ಮಗ್ಗೆ ರಾಯರ ಕೊಪ್ಪಲುಗಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಹಾಗೂ ಕೆಳ ರಸ್ತೆ ನಿರ್ಮಾಣವಾಗುತ್ತಿದೆ. ಆದರೆ, ವಾಹನ ಸವಾರರಿಗೆ ಯಾವುದೇ ರೀತಿಯ ಸೂಚನಾ ಫಲಕ ಮತ್ತು ತಡೆಗೋಡೆ ನಿರ್ಮಾಣ ಮಾಡದಿರುವುದು ಘಟನೆಗೆ ಕಾರಣ ಎನ್ನಲಾಗ್ತಿದೆ.
ಕಾರು ರಸ್ತೆಯಿಂದ ಗುಂಡಿಗೆ ಬಿದ್ದ ಬಳಿಕ ಸ್ಥಳೀಯರು ತಕ್ಷಣ ಗಾಯಾಳುವನ್ನು ರಕ್ಷಿಸಿದ್ದಾರೆ. ಘಟನೆ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗುತ್ತಿಗೆ ಪಡೆದಿರುವ ಸಂಸ್ಥೆಯ ವಿರುದ್ಧ ಸಾರ್ವಜನಿಕರು ಹಾಗೂ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ತಡೆಗೋಡೆ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.