ಹಾಸನ: ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಏಳು ದಿನಗಳ ಕಾಲ ಲಾಕ್ಡೌನ್ ಆಗಲಿದೆ. ಹೀಗಾಗಿ ಹಾಸನದಲ್ಲಿ ಕೂಡ ಅದರ ಎಫೆಕ್ಟ್ ಆಗಿದ್ದು, ಬಸ್ ಸಂಚಾರದಲ್ಲಿ ವ್ಯತ್ಯಾಸ ಉಂಟಾಗಲಿದೆ.
ಈಗ ಪ್ರತಿನಿತ್ಯ ಬೆಂಗಳೂರಿಗೆ 70 ಬಸ್ಗಳು ಸಂಚರಿಸುತ್ತಿದ್ದವು. ಇಂದು ರಾತ್ರಿ 8 ಗಂಟೆಯಿಂದ ಬೆಂಗಳೂರು ಬಂದ್ ಆಗುವ ಹಿನ್ನೆಲೆಯಲ್ಲಿ ಇಂದು 3 ಗಂಟೆಯತನಕ ಮಾತ್ರ ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ಬಸ್ ಸೌಕರ್ಯ ಕಲ್ಪಿಸಲಾಗುತ್ತದೆ. ಇನ್ನುಳಿದಂತೆ ಹಾಸನದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಕರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಹಾಯಕ ಸಂಚಾರ ವ್ಯವಸ್ಥಾಪಕಿ ಉಮಾಮಹೇಶ್ವರಿ ಮಾಹಿತಿ ನೀಡಿದರು.
ಬೆಂಗಳೂರು ಹೊರತುಪಡಿಸಿ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ತುಮಕೂರು ಭಾಗಗಳಿಗೂ 3 ಗಂಟೆಯವರೆಗೆ ಮಾತ್ರ ಬಸ್ ಸಂಚಾರದ ವ್ಯವಸ್ಥೆಯಿದ್ದು, ಪ್ರಯಾಣಿಕರು ಸಾಧ್ಯವಾದಷ್ಟು ಮೂರು ಗಂಟೆಯ ಒಳಗೆ ತಮ್ಮ ಪ್ರಯಾಣದ ಸಮಯವನ್ನು ನಿಗದಿಪಡಿಸಲು ಸೂಚಿಸಿದರು.
ಹಾಸನದಿಂದ ಹೊರ ಜಿಲ್ಲೆಗಳಿಗೆ ಹೋದಂತಹ ಬಸ್ಗಳು ಸಂಜೆ ವಾಪಸ್ ಬರುವ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ. ಬಸ್ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಉಳಿದುಕೊಳ್ಳುವ ಅಥವಾ ವಾಪಸ್ ಬರುವ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು ಎಂದರು.