ಹಾಸನ: ನಗರದ ಸಂಸ್ಕೃತ ಭವನದಲ್ಲಿ ಹಾಡ್ಲಹಳ್ಳಿ ಪಬ್ಲಿಕೇಷನ್ ಹಾಗೂ ನಿರಂತರ ಪ್ರಕಾಶನದ ವತಿಯಿಂದ ಹಾಡ್ಲಹಳ್ಳಿ ನಾಗರಾಜ್ ಅವರ ಎರಡು ಪುಸ್ತಕ ಬಿಡುಗಡೆ ಮಾಡಲಾಯ್ತು.
ಪುಸ್ತಕ ಬಿಡುಗಡೆ ಮಾತನಾಡಿದ ಲೇಖಕ ಡಾ. ಸಿ.ಚ ಯತೀಶ್ವರ್ ವಾಸ್ತವ ನೆಲೆಗಟ್ಟುಗಳನ್ನು ತಿಳಿದು, ರೈತರು ಸಂಕಷ್ಟದಲ್ಲಿರುವ ಬಗ್ಗೆ ಆಳವಾಗಿ ಅರಿತು ಬೆಳಕನ್ನು ಚೆಲ್ಲುವ ಕೆಲಸ ಪುಸ್ತಕದ ಮೂಲಕ ಹೊರ ಬಂದಿದೆ. ಇದೊಂದು ಮಾನವೀಯ ಅಂತಃಕರಣ ಪ್ರದರ್ಶಿಸಿದೆ ಎಂದು ಹೇಳಿದ್ರು. ಮಲೆನಾಡು ಭಾಗದ ಸುಂದರ ಬದುಕಿನ ಬಗ್ಗೆ ಕಣ್ಣಿನಲ್ಲಿ ಚಿತ್ರಿಸಿಕೊಂಡು ತಾನೇ ಸ್ವಯಂ ಅನುಭವಿಸಿ ಅಂತರಂಗದಲ್ಲಿ ಧ್ವನಿಯಾಗಿ ಅದು ಅಕ್ಷರವಾಗಿ ಈಗ ನಮ್ಮ ಮುಂದೆ ಪುಸ್ತಕ ಬಿಡುಗಡೆಯಾಗಿದೆ ಎಂದು ಹಾಡ್ಲಹಳ್ಳಿ ನಾಗರಾಜ್ ಬರಹದ ಪುಸ್ತಕದ ಬಗ್ಗೆ ವಿವರಿಸಿದರು.
ಖ್ಯಾತ ಕವಿಗಳಾದ ಪಿ. ಭಾರತೀದೇವಿಯವರು ನಿಲುವಂಗಿಯ ಕನಸು ಕಾದಂಬರಿ ಎರಡನೇ ಅವೃತ್ತಿ ಬಗ್ಗೆ ಮಾತನಾಡಿ, ಮಲೆನಾಡ ಸಾಂಸ್ಕೃತಿಕ ಚರಿತ್ರೆಯನ್ನು ಈ ಕಾದಂಬರಿ ಹೇಳುತ್ತದೆ. ಇಂದಿನ ಮೌಲ್ಯವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಿದ್ದೇವೆ. ಯಾವ ಬಗೆಯ ನಗರೀಕರಣವು ಆಕರ್ಷಿಸುತ್ತಿದೆ ಜೊತೆಗೆ ಇದಕ್ಕೆ ಒಳಗಾದವರು ಗಟ್ಟಿತನ ಉಳಿಸಿಕೊಂಡಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ಒಂದು ಪುಸ್ತಕ ಎಂದರೆ ಅದು ಅರ್ಥಪೂರ್ಣವಾಗಿ ಮತ್ತೊಬ್ಬರ ಬದುಕಿಗೆ ಸ್ಫೂರ್ತಿದಾಯಕವಾಗಿರಬೇಕು. ಅಂತಹ ಪ್ರಯತ್ನವನ್ನು ಮತ್ತು ಗ್ರಾಮೀಣ ಬದುಕಿನಲ್ಲಿ ಆಗಿರುವ ಬದಲಾವಣೆಯನ್ನು ಹಾಡ್ಲಹಳ್ಳಿ ನಾಗರಾಜ್ ಎಳೆ ಎಳೆಯಾಗಿ ತಮ್ಮ ಬರಹದಲ್ಲಿ ತಿಳಿಸಿದ್ದಾರೆ ಎಂದು ಹೇಳಿದರು.