ಹಾಸನ: ಮತದಾನ ಮಾಡುವ ಜಾಗದಲ್ಲಿ ವಾಮಾಚಾರ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹುಲ್ಲಂಗಾಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚುನಾವಣೆಗೆ ಹೋಗಲು ಮತದಾರರು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯ ಮತಗಟ್ಟೆಯ ಬಳಿ ಕುಡಿಕೆಗಳನ್ನು ಮಣ್ಣಿನಿಂದ ಹೂತಿಟ್ಟು ಕಿಡಿಗೇಡಿಗಳು ಪೂಜೆ ಮಾಡಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಸ್ಥರು ಜಮಾಯಿಸಿದ್ದು, ಕುತೂಹಲದಿಂದ ನೋಡಲು ಮುಗಿಬಿದ್ದಿದ್ದಾರೆ.
ಎಲ್ಲೆಲ್ಲಿ ಇಂತಹ ವಾಮಾಚಾರ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ನಾಳೆ ಮತದಾನ ಮಾಡಲು ಮತ ಕೇಂದ್ರಕ್ಕೆ ಬರುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಇಂತಹ ಕೃತ್ಯ ಮಾಡಿರುವವರನ್ನು ಚಪ್ಪಲಿಯಲ್ಲಿ ಹೊಡಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಘಟನೆ ನಡೆದ ಸ್ಥಳಕ್ಕೆ ಚುನಾವಣಾ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅರಕಲಗೂಡು ಗ್ರಾಮಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.