ಹಾಸನ: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮೋದಿ ವಿರುದ್ಧ ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡಿದ್ದು, ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಹಾಸನದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹೀಗಿರುವಾಗ, ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡುತ್ತಿರುವುದು ತರವಲ್ಲ. ಇದು ದೇಶದ ಜನರನ್ನ ದಾರಿ ತಪ್ಪಿಸುವಂತಹ ಕೆಲಸವಾಗಿದೆ ಎಂದರು.
ಇನ್ನು ಸುಳ್ಳು ಆರೋಪ ಮಾಡಿದ ರಾಹುಲ್ ಗಾಂಧಿ ದೇಶದ ಜನತೆಯ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಹೆಚ್. ಎಂ. ವಿಶ್ವನಾಥ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಮರ್ಯಾದೆಯನ್ನು ಹರಾಜು ಮಾಡಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ, ರಾಹುಲ್ ಗಾಂಧಿ ಮಾಡಿರೋ ಆರೋಪ ಸತ್ಯಕ್ಕೆ ದೂರವಾಗಿದ್ದು, ತೀರ್ಪನ್ನು ಅಪಮಾನಿಸಿ ಚೌಕೀದಾರ್ ಚೋರ್ ಎಂದಿರುವುದು ಅಕ್ಷಮ್ಯ ಅಪರಾಧ. ಅಲ್ಲದೇ ಸೈನಿಕರ ರಕ್ಷಣೆಯ ಗುಪ್ತಚರ ಮಾಹಿತಿಯನ್ನು ವಿದೇಶಗಳಿಗೆ ಬಹಿರಂಗಪಡಿಸುವ ಯತ್ನ ಮಾಡಿದ್ದು ಈಗಾಗಲೇ ನ್ಯಾಯಾಲಯದ ಕ್ಷಮೆ ಕೋರಿದ್ದಾರೆ. ಆದರೆ ಈಗ ಮತ್ತೆ ಅದೇ ರಾಗವನ್ನು ಹಾಡಿರುವುದು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.