ಹಾಸನ: ಹಾಸನದಲ್ಲಿ ಎಲ್ಲಿ ನೋಡಿದರು ಜೆಡಿಎಸ್ ಬಾವುಟ ಹಾರುತ್ತಿವೆ. ಜೆಡಿಎಸ್ ಕಾರ್ಯಕರ್ತರು ಸೈನಿಕರ ರೀತಿ ಹೋರಾಟಕ್ಕೆ ಇಳಿದಿರುವುದರಿಂದ ಈ ಚುನಾವಣೆಯಲ್ಲಿ ಸ್ವರೂಪ್ ಅವರು ಗೆದ್ದು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಹಾಸನದಲ್ಲಿ ಇಂದು ನಡೆದ ರಂಜಾನ್ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡೀ ಜಗತ್ತಿನಲ್ಲಿ ಮುಸ್ಲಿಂ ಭಾಂದವರು ಒಂದು ತಿಂಗಳಿನಿಂದ ಉಪವಾಸ ಆಚರಣೆ ಮಾಡಿ ನಿಷ್ಠೆ, ಭಕ್ತಿಯನ್ನು ದೇವರಿಗೆ ತೋರಿಸಿದ್ದಾರೆ. ಪ್ರತಿ ವರ್ಷ ನಮ್ಮ ಕುಟುಂಬದಿಂದ ಇಫ್ತಾರ್ ಕೂಟ ಏರ್ಪಡಿಸುತ್ತ ಬಂದಿದ್ದೇವೆ. ಈ ಬಾರಿ ನಮ್ಮ ಕುಟುಂಬದವರು ಎಲ್ಲಾ ಕಡೆ ಬೇಟಿ ನೀಡಿ ಮುಸ್ಲಿಂ ಬಾಂಧವರಿಗೆ ಶುಭ ಕೋರುತ್ತಿದ್ದಾರೆ. ಹಾಸನ ಅಭ್ಯರ್ಥಿ ಹೆಚ್ ಪಿ ಸ್ವರೂಪ್ ಅವರನ್ನು ಕರೆದುಕೊಂಡು ಬಂದು ಎಲ್ಲರನ್ನೂ ಮಾತನಾಡಿಸಿ ವಿಶ್ವಾಸವನ್ನು ಮೂಡಿಸುವ ಕೆಲಸ ಮಾಡಿಸಿದ್ದೇವೆ ಎಂದರು.
ಎಲ್ಲರೂ ಸೇರಿ ಈ ಬಾರಿ ಹಾಸನ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ, ನಾವು ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಒಂದು ತಪ್ಪು ಕಲ್ಪನೆಯಿತ್ತು. ಜೆಡಿಎಸ್ ಪಕ್ಷದಲ್ಲಿ ಕಾರ್ಯಕರ್ತರು, ಮುಖಂಡರು ಯಾರೂ ಇಲ್ಲ ಎಂದು ಅವರು ತಿಳಿದಿಕೊಂಡಿದ್ದರು. ಆದರೆ ಇವತ್ತು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರುಗಳು ಕಾಣಿಸುತ್ತಿಲ್ಲ ಎಂದು ಪ್ರಜ್ವಲ್ ರೇವಣ್ಣ ವ್ಯಂಗ್ಯವಾಡಿದರು. ಬದಲಾವಣೆ ಶುರುವಾಗಿದೆ. ಚುನಾವಣೆ ದಿನದಂದು ಹಾಸನ ತಾಲ್ಲೂಕಿನ ಜನ ಜೆಡಿಎಸ್ಗೆ ವೋಟ್ ಕೊಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಹಾಗಾಗಿ ಈ ಬಾರಿ ನೂರಕ್ಕೆ ನೂರರಷ್ಟು ಹಾಸನ ತಾಲ್ಲೂಕಿನಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಾಳೆ ಸಿದ್ದಗಂಗಾ ಮಠದ ಉತ್ತರಾಧಿಕಾರಿಗೆ ಪಟ್ಟಾಭಿಷೇಕ.. ನೀತಿ ಸಂಹಿತೆ ಹಿನ್ನೆಲೆ ಸರಳ ಕಾರ್ಯಕ್ರಮ
ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಹೇಳಿಕೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದರು, ಇವಾಗ ಬುದ್ಧಿ ಬರೋದು, ಮೂರು ವರ್ಷದ ಹಿಂದೆ ಬುದ್ಧಿ ಬಂದಿದ್ದರೆ ಅನುಕೂಲ ಆಗಿರೋದು. ಜನಕ್ಕೆ ಅವರ ಬಗ್ಗೆ ಎಲ್ಲಾ ವಿಚಾರ ಗೊತ್ತಾಗಿದೆ. ನಾನು ಅವರ ಬಗ್ಗೆ ಮಾತನಾಡಬೇಕಿಲ್ಲ. ಜನರೇ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಏನೇ ತಂತ್ರಗಾರಿಕೆ ಮಾಡಿದರೂ ಕೂಡ ಏನು ನಡೆಯಲ್ಲ ಎಂದರು.
ಇದನ್ನೂ ಓದಿ: ಹಿಂದಿನ ಬಾರಿ ಕೈಕೊಟ್ಟ ಅಲ್ಪಸಂಖ್ಯಾತ ಮತಗಳು ಈ ಬಾರಿ ಜೆಡಿಎಸ್ ಕೈ ಹಿಡಿಯುವುದೇ?
ಅಂದು ಹೊಳೆನರಸೀಪುರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಮಾಧ್ಯಮದವರನ್ನು ದಿಕ್ಕು ತಪ್ಪಿಸಿದ್ದರು. ಅಂತಹ ಕೆಲಸ ಮಾಡುತ್ತಿರುತ್ತಾರೆ. ಅವ್ಯಾವುದಕ್ಕೂ ಕಿವಿ ಕೊಡಲು ನಮ್ಮ ಕಾರ್ಯಕರ್ತರಾಗಲಿ, ಈ ಕ್ಷೇತ್ರದ ಜನತೆ ತಯಾರಿಲ್ಲ. ಈ ಸಾರಿ ನಾವು ಜೆಡಿಎಸ್ ಅಭ್ಯರ್ಥಿ ಎಚ್ಪಿ ಸ್ವರೂಪ್ ಅವರನ್ನು ಗೆಲ್ಲಿಸಬೇಕು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಎಂದು ನಿರ್ಣಯ ಮಾಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಬೇಸತ್ತು ಶೆಟ್ಟರ್ - ಸವದಿ ಕಾಂಗ್ರೆಸ್ ಸೇರಿದ್ದಾರೆ : ವಿಜಯಾನಂದ ಕಾಶಪ್ಪನವರ್