ಹಾಸನ: ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಹಾಗೂ ಹಿಂದೆ ಕುಳಿತ ವ್ಯಕ್ತಿ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹಳೇಬೀಡು ರಸ್ತೆಯಲ್ಲಿ ನಡೆದಿದೆ.
ಇಲ್ಲಿನ ಪುರದಮ್ಮ ದೇವಾಲಯದ ಕಡೆಯಿಂದ ವೇಗವಾಗಿ ಆಗಮಿಸಿದ ಪಲ್ಸರ್ ಬೈಕ್ ಕಲ್ಲಿಗೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ, ಬೈಕ್ ಸಿನಿಮಾ ರೀತಿಯಲ್ಲಿ ಮೇಲಕ್ಕೆ ಹಾರಿ ಸುಮಾರು 20 ಅಡಿ ದೂರಕ್ಕೆ ಬಿದ್ದಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಯಾರೆಂದು ಇನ್ನು ಪತ್ತೆಯಾಗಿಲ್ಲ, ಅತೀ ವೇಗ ಮತ್ತು ಹೆಲ್ಮೆಟ್ ಧರಿಸದ ಕಾರಣ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಬ್ಬರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಹಳೆಬೀಡಿನ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದು, ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.