ಹಾಸನ: ಗಣೇಶ ಹಬ್ಬ ಬಂತೆಂದರೆ ಗಣಪನ ಪಕ್ಕದಲ್ಲಿ ಗೌರಿಯನ್ನು ಕೂರಿಸಿ ಪೂಜೆ ಸಲ್ಲಿಸಿ ಹಬ್ಬ ಆಚರಣೆ ಮಾಡುವುದು ಸಾಮಾನ್ಯ. ಈ ಸಂದರ್ಭದಲ್ಲಿ ಗಣೇಶನಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ, ಇಲ್ಲಿನ ಗ್ರಾಮವೊಂದರಲ್ಲಿ ಗಣೇಶನಿಗಿಂತ ಹೆಚ್ಚು ಗೌರಿಯನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾಡಾಳು ಗೌರಮ್ಮನಿಗೆ 153 ವರ್ಷದ ಇತಿಹಾಸವಾದ್ರೆ, ಸಾಣೇನಹಳ್ಳಿಯ ಗೌರಮ್ಮನಿಗೆ 304 ವರ್ಷಗಳ ಇತಿಹಾಸವಿದೆ. ಹಾಸನ ತಾಲೂಕಿನಲ್ಲಿರುವ ಸಾಣೇನಹಳ್ಳಿಯಲ್ಲಿ ಪ್ರತಿವರ್ಷ ಭಾದ್ರಪದ, ಶುಕ್ಲ ಮಾಸದ ಚೌತಿಯ ಹಿಂದಿನ ದಿನ ಗೌರಿಯನ್ನ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಎಲ್ಲ ಕಡೆ ಜೇಡಿಮಣ್ಣಿನ ಗಣಪ, ಗೌರಿಯನ್ನು ಪ್ರತಿಷ್ಠಾಪನೆ ಮಾಡಿದರೆ, ಇಲ್ಲಿ ಮಾತ್ರ ಕಡಲೆ ಹಿಟ್ಟು, ಬೆಣ್ಣೆ ಮತ್ತು ಎಳನೀರಿನಿಂದ ತಯಾರಿಸಲಾದ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತದೆ. ಇದುವೇ ಇಲ್ಲಿನ ವಿಶೇಷ.
ಕೆರೆಯಲ್ಲಿ ಬಟ್ಟೆ ತೊಳೆಯುವಂತಿಲ್ಲ; ಕಾಯಿಚಿಪ್ಪು ಒಲೆಗೆ ಹಾಕುವಂತಿಲ್ಲ: ಪ್ರತಿಷ್ಠಾಪನೆಯಾದ 13 ರಿಂದ 19 ದಿನಗಳ ಕಾಲ ಈ ಗ್ರಾಮದ ಕೆರೆಯಲ್ಲಿ ಬಟ್ಟೆ ತೊಳೆಯುವಂತಿಲ್ಲ. ಜೊತೆಗೆ ಕಾಯಿಚಿಪ್ಪನ್ನು ಉರುವಲಾಗಿ ಬಳಸುವಂತಿಲ್ಲ. ಹಾಗೇನಾದರೂ ಬಳಸಿದರೆ ಪ್ರತಿಷ್ಠಾಪನೆಗೊಂಡ ಗೌರಿಯ ಮುಖದಲ್ಲಿ ಬೊಬ್ಬೆಗಳಾಗುತ್ತಂತೆ. ಋತುಮತಿಯಾದ ಹೆಣ್ಣು ಮಕ್ಕಳು ಪೂಜೆ ಪುನಸ್ಕಾರ ಮಾಡುವ ಹಾಗಿಲ್ಲ. ಅದು ಅಪಶಕುನದ ಸಂಕೇತವಂತೆ. ಅಷ್ಟೇ ಅಲ್ಲದೆ ಮುಖದಲ್ಲಿ ಕಪ್ಪುಕಲೆಗಳು ಕಾಣಿಸಿಕೊಳ್ಳುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಇನ್ನು ಗ್ರಾಮದ ಮುತೈದೆಯರು ಪ್ರತಿಷ್ಠಾಪನೆಗೊಂಡ ಬಳಿಕ ಆಕೆಗೆ ಬಾಗಿನ ಅರ್ಪಿಸುವ ಮೂಲಕ ಗ್ರಾಮಕ್ಕೆ ಬರಮಾಡಿಕೊಳ್ಳುತ್ತಾರೆ.
ಸಂತಾನ ಕರುಣಿಸುವ ಗೌರಿ ಈಕೆ: ಮಕ್ಕಳಿಲ್ಲದ ದಂಪತಿ ಇಲ್ಲಿಗೆ ಬಂದು ಹರಕೆ ಹೊತ್ತರೆ ಅವರಿಗೆ ಸಂತಾನ ಭಾಗ್ಯವನ್ನು ಈ ತಾಯಿ ಕರುಣಿಸುತ್ತಾಳಂತೆ. ಊರಿನಿಂದ ಬೇರೆಡೆಗೆ ಕೊಟ್ಟ ಹೆಣ್ಣು ಮಕ್ಕಳಿಂದ ಹಿಡಿದು ಗ್ರಾಮದ ಸೊಸೆಯಂದಿರ ಸಮೇತ ಯಾರೊಬ್ಬರು ತಪ್ಪದೇ ಈ ದಿನ ಗೌರಿ ಪೂಜೆಯಲ್ಲಿ ಭಾಗವಹಿಸುತ್ತಾರೆ.
ತಾಯಿ ಮತ್ತು ಮಗನ ನಡುವೆ ಬಿರುಕು ಬಿಟ್ಟಿದ್ದರೇ ಈ ದೇವಿಗೆ ಬಂದು ಹರಕೆ ಹೊತ್ತರೆ ಸಾಕು, ಸಂಬಂಧಗಳು ಮತ್ತೆ ಒಂದಾಗುತ್ತದೆಯಂತೆ. ಈ ಹಿಂದೆ 9 ರಿಂದ 11 ದಿನಗಳ ಕಾಲ ಪ್ರತಿಷ್ಠಾಪಿಸುತ್ತಿದ್ರು. ಆದ್ರೆ ಇದೀಗ ಆರ್ಥಿಕವಾಗಿ ಗ್ರಾಮ ಸದೃಢವಾಗಿರುವುದರಿಂದ 15, 17, 19, ಹೀಗೆ ಹಲವು ದಿನಗಳ ಕಾಲ ಗೌರಿಯನ್ನ ಪ್ರತಿಷ್ಠಾನಪನೆ ಮಾಡುತ್ತಿದ್ದಾರೆ.
ಇನ್ನು ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನಲೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಮರುದಿನ ವಿಸರ್ಜನೆ ಮಾಡಲಾಗುತ್ತಿದೆ. ಅಲ್ಲದೇ ಗಣಪತಿಯನ್ನ ಗೌರಮ್ಮನ ತೊಡೆಯ ಮೇಲೆ ಪ್ರತಿಷ್ಠಾಪನೆ ಮಾಡಿ ಪೂಜಿಸುವುದು ಈ ಗ್ರಾಮದ ವಾಡಿಕೆ. ಕಳೆದ 3 ಶತಮಾನದದಿಂದ ಈ ಹಬ್ಬವನ್ನ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.