ಹಾಸನ: ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಹಾಗಾಗಿ, ಈ ಕೂಡಲೇ ಆರ್.ಟಿ.ಇ. ಹಣವನ್ನು ಬಿಡುಗಡೆ ಮಾಡುವಂತೆ ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಬಿ.ಈ. ಶಿವರಾಮೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಮಹಾಮಾರಿ ಹಿನ್ನೆಲೆಯಲ್ಲಿ ಕಳೆದ 3 ತಿಂಗಳಿಂದ ಶಾಲಾ ಕಾಲೇಜುಗಳು ಮುಚ್ಚಿವೆ. ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯಲು ದಿನಾಂಕ ಪ್ರಕಟಿಸಿದೆ. ಈ ಆದೇಶವನ್ನು HUSMA - ಹಾಸನ (KAMS ಸಹಯೋಗ) ಸಂಘಟನೆಯು ವಿರೋಧಿಸುತ್ತದೆ ಎಂದರು.
ಚಿಕ್ಕ ಮಕ್ಕಳನ್ನು ಶಾಲೆಗೆ ಈ ಹಂತದಲ್ಲಿ ಯಾರೂ ಕೂಡ ಕಳುಹಿಸಬಾರದೆಂಬ ಸಾರ್ವಜನಿಕರ ಅಭಿಪ್ರಾಯವನ್ನು ನಮ್ಮ ಸಂಘವು ಕೂಡ ಬೆಂಬಲಿಸುತ್ತದೆ. ಶಾಲಾ ಸಿಬ್ಬಂದಿಯ ವೇತನ, ಕಟ್ಟಡ ನಿರ್ವಹಣೆ, ನೀರು, ಇತರೆ ತೆರಿಗೆ ಪಾವತಿ, ಬ್ಯಾಂಕ್, ಸಹಕಾರ ಸಂಸ್ಥೆಗಳಿಂದ ಪಡೆದ ಸಾಲದ ಮರುಪಾವತಿ, ಹೀಗೆ ಹಲವು ಬಗೆಯಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳೂ ಆರ್ಥಿಕವಾಗಿ ಕಷ್ಟವನ್ನು ಅನುಭವಿಸುತ್ತಾ ನಲುಗುತ್ತಿವೆ. ಆದ್ದರಿಂದ ಆರ್.ಟಿ.ಇ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಲು ತುಂಬಾ ಕಷ್ಟವಾಗುತ್ತಿರುವುದರಿಂದ ತಕ್ಷಣದಲ್ಲಿ 1,000 ಕೋಟಿ ರೂಗಳನ್ನು ಬಡ್ಡಿ ರಹಿತ ಸಾಲವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದರು.
ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಶುಲ್ಕ ಪಡೆದು ಶಿಕ್ಷಕರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ವೇತನ ಹಾಗು ಇನ್ನಿತರೆ ಖರ್ಚು ಮಾಡುತ್ತಿದ್ದು, 2019 ಡಿ. 16ರ ಸುತ್ತೋಲೆಯಂತೆ ನೌಕರರಿಗೆ 6ನೇ ವೇತನ ಆಯೋಗದ ದರದಂತೆ ಕನಿಷ್ಟ ವೇತನವನ್ನು ನೀಡಲು ಸೂಚಿಸಿದ್ದು, ಇದನ್ನು ಖಾಸಗಿ ಶಾಲೆಗಳು ಅನುಷ್ಠಾನಗೊಳಿಸಿದ್ದಲ್ಲಿ ಪ್ರತಿ ವಿದ್ಯಾರ್ಥಿಗಳಿಂದ ಶೇ 300 ಪಟ್ಟು ಹೆಚ್ಚು ಶುಲ್ಕವನ್ನು ಪಡೆಯಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಪೋಷಕರಿಗೆ ಆರ್ಥಿಕ ಹೊರೆಯಾಗುವುದರಿಂದ ಅವೈಜ್ಞಾನಿಕವಾದ ಈ ಆದೇಶವನ್ನು ಇಲಾಖೆ ತಕ್ಷಣ ವಾಪಸ್ ಪಡೆಯಬೇಕೆಂದು ಮನವಿ ಮಾಡಿದರು.