ಸಕಲೇಶಪುರ: ಹಲವು ಭ್ರಷ್ಟಾಚಾರ ಆರೋಪಗಳಲ್ಲಿ ಭಾಗಿಯಾಗಿರುವ ನಗರ ಠಾಣೆ ಪಿಎಸ್ಐ ರಾಘವೇಂದ್ರರವರನ್ನು ಕೂಡಲೇ ಅಮಾನತು ಮಾಡದಿದ್ದಲ್ಲಿ, ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಭಜರಂಗದಳ ದಕ್ಷಿಣ ಪ್ರಾಂತ ಮುಖಂಡ ಮುರಳಿಕೃಷ್ಣ ಹಸಂತಡ್ಕ ಹೇಳಿದ್ದಾರೆ.
ಪಟ್ಟಣದಲ್ಲಿ ತಾಲೂಕು ವಿಶ್ವಹಿಂದೂ ಪರಿಷದ್ ಹಾಗೂ ಭಜರಂಗದಳ ವತಿಯಿಂದ ನಗರ ಠಾಣೆ ಪಿಎಸ್ಐ ರಾಘವೇಂದ್ರ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ್ರು. ಹಿಂದೂಗಳಿಗೆ ಗೋವು ಅತಿ ಪ್ರಾಮುಖ್ಯವಾಗಿದ್ದು, ಗೋವನ್ನು ದೇವರ ರೂಪದಲ್ಲಿ ನೋಡುತ್ತಾರೆ. ಆದರೆ ಕೆಲವರು ಹಣಕ್ಕಾಗಿ ಗೋ ಹತ್ಯೆಯನ್ನು ಮಾಡುತ್ತಿದ್ದಾರೆ. ನಗರ ಠಾಣೆ ಪಿಎಸ್ಐ ಇದನ್ನು ತಡೆಗಟ್ಟುವ ಬದಲು ಗೋಹತ್ಯೆ ಮಾಡುವ ವ್ಯಕ್ತಿಗಳ ಜೊತೆ ಕೈಜೋಡಿಸಿ ಭಜರಂಗದಳ ಕಾರ್ಯಕರ್ತರ ಹೋರಾಟವನ್ನು ಹತ್ತಿಕ್ಕಲು ಸುಳ್ಳು ಪ್ರಕರಣಗಳನ್ನು ದಾಖಲು ಮಾಡುತ್ತಿರುವುದು ಖಂಡನೀಯವಾಗಿದೆ. ಗೋ ಹತ್ಯೆ ಮಾಡುವವರಿಗೆ ಬೆಂಬಲ ನೀಡಿ ಗೋಹತ್ಯೆ ತಡೆಯುವರಿಗೆ ಕಿರುಕುಳ ನೀಡುತ್ತಿರುವ ಪಿಎಸ್ಐ ರಾಘವೇಂದ್ರರವರನ್ನು ಕೂಡಲೇ ಅಮಾನತು ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.
ಭಜರಂಗದಳ ದಕ್ಷಿಣ ಪ್ರಾಂತ ಸಹ ಕಾರ್ಯವಾಹಕ ರಘು ಸಕಲೇಶಪುರ ಮಾತನಾಡಿ, ನಾವು ಪೊಲೀಸ್ ಇಲಾಖೆ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ. ತಾಲೂಕಿನಲ್ಲಿ ಗೋಹತ್ಯೆಯನ್ನು ತಡೆಗಟ್ಟುತ್ತಿರುವ ಗಿರೀಶ್ ರಂತಹ ಪೊಲೀಸ್ ಅಧಿಕಾರಿಗೆ ಗೌರವ ಕೊಡುತ್ತೇವೆ. ಆದರೆ ನಗರ ಠಾಣೆ ಪಿಎಸ್ಐ ರಾಘವೇಂದ್ರ ಅಕ್ರಮ ಮರಳುಗಾರಿಕೆ, ಇಸ್ಪೀಟ್ ದಂಧೆ, ಗಾಂಜಾ ದಂಧೆ, ಗೋಹತ್ಯೆಗಳನ್ನು ಮಾಡುವರ ಜೊತೆ ಹಣಕ್ಕಾಗಿ ಕೈಜೋಡಿಸಿದ್ದಾರೆ. ಇವರು ಬೇನಾಮಿಯಾಗಿ ಅಕ್ರಮ ಆಸ್ತಿ ಮಾಡಿದ್ದು, ಕೂಡಲೇ ಇವರ ದೂರವಾಣಿ ಕರೆಗಳನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.