ಅರಕಲಗೂಡು: ಮಾನವ ತನ್ನ ದುರಾಸೆಗಾಗಿ ಕಾಡು ನಾಶ ಮಾಡುತ್ತಿದ್ದಾನೆ. ಹೀಗೆ ಮುಂದುವರಿದರೆ ಅನೇಕ ರೀತಿಯ ದುಷ್ಪರಿಣಾಮಗಳನ್ನು ನಾವು ಎದುರಿಸಬೇಕಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಕಲಗೂಡು ತಾಲೂಕು ಕೃಷಿ ಅಧಿಕಾರಿ ಶಶಿಧರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕೊಣನೂರು ಸಮೀಪದ ಕೆರೆಕೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ಪರಿಸರ ನಾಶ ಹೆಚ್ಚಾಗುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ತೀವ್ರವಾದ ಪ್ರಾಕೃತಿಕ ಅಸಮತೋಲನ ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಬೆಳೆಸಿ, ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.
ಕೊಣನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ.ರಮೇಶ್ ಮಾತನಾಡಿ, ಕಾಡುಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರೈತರು ತಮ್ಮ ಜಮೀನಿನಲ್ಲಿ ನಾಟಿ ಮಾಡಲು ಪ್ರತಿ ವರ್ಷ ಅರಣ್ಯ ಇಲಾಖೆಯಿಂದ ಗಿಡಗಳನ್ನು ಕೊಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ವೇದಿಕೆ ಕಾರ್ಯಕ್ರಮದ ನಂತರ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರುಣಿಸಲಾಯಿತು. ಈ ವೇಳೆ, ಶಾಲಾ ಮುಖ್ಯ ಶಿಕ್ಷಕಿ ಪಾರ್ವತಮ್ಮ , ಮೇಲ್ವಿಚಾರಕಿ ಹರಿಣಾಕ್ಷಿ, ಎಸ್‍ಡಿಎಂಸಿ ಅಧ್ಯಕ್ಷೆ ಅನುಸೂಯ, ಗ್ರಾ.ಪಂ.ಸದಸ್ಯರಾದ ಮೀನಾಕ್ಷಿ, ಶಿಕ್ಷಕಿ ಸರಸ್ವತಿ, ಸೇವಾಪ್ರತಿನಿಧಿ ಜಯಲಕ್ಷ್ಮಿ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ರೈತರು ಮುಂತಾದವರು ಉಪಸ್ಥಿತರಿದ್ದರು.