ಹಾಸನ: ಕೊರೊನಾ ಹಿನ್ನೆಲೆಯಲ್ಲಿ ದೇವರ ಉತ್ಸವ ಮಾಡಿಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅರ್ಚಕ ಮತ್ತು ಆತನ ತಾಯಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಕಬ್ಬತ್ತಿ ಗ್ರಾಮದಲ್ಲಿ ನಡೆದಿದೆ.
ಶ್ರೀಕಾಂತ್ ಮತ್ತು ಶಾಂತಮ್ಮ ಹಲ್ಲೆಗೊಳಗಾದ ಅರ್ಚಕ ಕುಟುಂಬದವರು. ಗ್ರಾಮದ ದೇವೇಗೌಡ, ಆನಂದ್, ನಾಗಣ್ಣ, ಶ್ರೀನಿವಾಸಚಾರ್ ಮತ್ತು ಮಹಿಂದ್ರ ಎಂಬುವರ ಮೇಲೆ ಹಲ್ಲೆ ನಡೆಸಿದ ಆರೋಪವಿದೆ. ಪೂಜೆಯ ವಿಚಾರಕ್ಕೆ ಈ ಐವರು ತಾಯಿ, ಮಗನ ಮೇಲೆ ಹಲ್ಲೆಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಬಗ್ಗೆ ಮತ್ತಷ್ಟು ವಿವರ
ಗ್ರಾಮದ ಕುಟುಂಬವೊಂದರ ಮದುವೆ ಕಾರ್ಯಕ್ರಮ ನಿಗದಿಯಾಗಿತ್ತು. ಹೀಗಾಗಿ ರಂಗನಾಥ ಸ್ವಾಮಿ ದೇವರ ಮೆರವಣಿಗೆ ಮಾಡುವಂತೆ ಅರ್ಚಕ ಶ್ರೀಕಾಂತ್ ಅವರನ್ನು ಕೇಳಿಕೊಂಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ದೇವಸ್ಥಾನಗಳನ್ನು ಬಂದ್ ಮಾಡಿದ್ದು, ಈ ವೇಳೆ ನಾನು ದೇವರ ಉತ್ಸವ ಮಾಡುವುದಿಲ್ಲ ಎಂದು ಶ್ರೀಕಾಂತ್ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಎಂದಿನಂತೆ ಶ್ರೀಕಾಂತ್ ಕುಟುಂಬ ಡೈರಿಗೆ ಹಾಲು ಹಾಕಲು ಹೋದಾಗ ಹಾಲು ಪಡೆಯದೆ ಐವರು ಗಲಾಟೆ ಮಾಡಿದ್ದಾರೆ. ಪೂಜೆ ಮಾಡಿ ಕೊಡದ ನಿಮ್ಮ ಮನೆಯ ಹಾಲನ್ನು ನಾವು ಪಡೆಯುವುದಿಲ್ಲ ಎಂದು ಕ್ಯಾತೆ ತೆಗೆದಿದ್ದಾರೆ. ನಂತರ ಗಲಾಟೆ ಮಾಡುತ್ತಿದ್ದ ವೇಳೆ ಚಿತ್ರೀಕರಣ ಮಾಡಲು ಮುಂದಾದಾಗ ಅಲ್ಲಿದ್ದ ಕೆಲವರು ಮೊಬೈಲ್ ಕಿತ್ತುಕೊಂಡು ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲ ಶ್ರೀಕಾಂತ್ ಮೇಲೆ ಹಲ್ಲೆ ನಡೆಸಿದ್ದಾರೆ. ಮಗನ ಮೇಲೆ ಹಲ್ಲೆ ಮಾಡುತ್ತಿದ್ದುದನ್ನು ಕೇಳಿ ತಾಯಿ ಸ್ಥಳಕ್ಕೆ ಬಂದಾಗ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ಶ್ರೀಕಾಂತ್ ಮತ್ತು ಶಾಂತಮ್ಮ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಜರುಗಿದ ಬಳಿಕ ಗ್ರಾಮ ಪಂಚಾಯಿತಿಯಿಂದ ಅಳವಡಿಸಿದ ನಲ್ಲಿ ನೀರನ್ನು ಬಂದ್ ಮಾಡಿಸಿದ್ದು, ಗ್ರಾಮದಲ್ಲಿ ಯಾರೂ ಸಹಾಯ ಮಾಡದಂತೆ ಬೆದರಿಕೆ ಹಾಕಿದ್ದಾರೆ ಅನ್ನೋದು ಹಲ್ಲೆಗೊಳಗಾದ ಶ್ರೀಕಾಂತ್ ಪೋಷಕರ ಆರೋಪ.
ಗ್ರಾಮಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಲ್ಲೆಗೊಳಗಾದ ಪೋಷಕರು ದೂರು ದಾಖಲಿಸಿದ್ದಾರೆ.