ಹಾಸನ: ಖಾಸಗಿ ಆಸ್ಪತ್ರೆಯ ಮುಖ್ಯಸ್ಥರೊಬ್ಬರು ಬಡ ಆಶಾ ಕಾರ್ಯಕತೆಯರ ಆರೋಗ್ಯದ ಹಿತದೃಷ್ಟಿಯಿಂದ 1 ಲಕ್ಷದ ಆರೋಗ್ಯ ವಿಮೆ ಸೌಲಭ್ಯವನ್ನು ಉಚಿತವಾಗಿ ನೀಡಿದ್ದಾರೆ.
ಸುಮಾರು 25 ಆಶಾ ಕಾರ್ಯಕರ್ತೆಯರಿಗೆ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಅಬ್ದುಲ್ ಬಶೀರ್ ಎಂಬುವವರು 1 ವರ್ಷದ ಆರೋಗ್ಯ ಸೌಲಭ್ಯ ಪಡೆದುಕೊಳ್ಳುವ ವಿಮೆಯನ್ನು ಉಚಿತವಾಗಿ ಅವರ ಹೆಸರುಗಳಲ್ಲಿ ಮಾಡಿಸಿದ್ದಾರೆ. ಈ ಸಂಬಂಧ ಮೊದಲ ಹಂತವಾಗಿ 92 ಸಾವಿರ ರೂಪಾಯಿಗಳ ಚೆಕ್ಅನ್ನು ಜಿಲ್ಲಾಧಿಕಾರಿ ಮೂಲಕ ನ್ಯೂ ಇಂಡಿಯಾ ವಿಮಾ ಕಂಪನಿಯ ರಾಜಶೇಖರ್ ಅವರಿಗೆ ಹಸ್ತಾಂತರಿಸಿದರು.
ಈ ಕುರಿತು ಹಿರಿಯ ಸಾಹಿತಿ ರೂಪ ಹಾಸನ್ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಸೌಲಭ್ಯದ ವಿಮೆ ನೀಡಿರುವುದು ಅತ್ಯುತ್ತಮ ಸೇವೆಯಾಗಿದೆ. ಬಡತನದಲ್ಲಿರುವ 25 ಆಶಾ ಕಾರ್ಯಕರ್ತೆಯರನ್ನು ಗುರುತಿಸಿ, ಅವರಿಗೆ ಸೌಲಭ್ಯ ಕಲ್ಪಿಸಲಾಗಿದೆ. ದೇಶದಲ್ಲಿ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಈ ವಿಮೆ ಮೂಲಕ ವೆಚ್ಚ ಭರಿಸಬಹುದು ಎಂದರು.
ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಸಿಗುವ ಗೌರವಧನ ಅತ್ಯಂತ ಕಡಿಮೆ ಇದೆ. ಇಂತಹ ಸಂದರ್ಭದಲ್ಲಿಯೂ ಜೀವ ಲೆಕ್ಕಿಸದೇ ಸರ್ಕಾರದ ಕೆಲಸವನ್ನು, ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಾರೆ. ತಪಾಸಣೆ, ಸಮೀಕ್ಷೆಯಂತಹ ಹಲವಾರು ಕೆಲಸಗಳು ಇವರ ಕೊರಳಿಗೆ ಬೀಳುತ್ತವೆ. ಸರ್ಕಾರ ಮುಂಬರುವ ದಿನಗಳಲ್ಲಿ ಪ್ರೋತ್ಸಾಹಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕೆಲ ದಿನಗಳ ಹಿಂದೆ ಹಿರಿಯ ಸಾಹಿತಿ ರೂಪ ಹಾಸನ್ ಆಶಾ ಕಾರ್ಯಕರ್ತೆಯರ ಆರೋಗ್ಯದ ವಿಚಾರವಾಗಿ ಚರ್ಚಿಸಿದ್ದರು ಎಂದು ಡಾ.ಅಬ್ದುಲ್ ಬಶೀರ್ ಹೇಳಿದರು.