ಹಾಸನ: ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ರೂ. ಮಾಸಿಕ ವೇತನ, ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ರಕ್ಷಣಾ ಸಾಮಗ್ರಿ ನೀಡುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಮಮತಾ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮೌನ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರೋತ್ಸಾಹಧನ ಮತ್ತು ಗೌರವಧನವನ್ನು ವಿಭಿನ್ನ ವೇತನ ಮಾದರಿಯಲ್ಲಿ ಪಾವತಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಪ್ರತಿ ಆಶಾ ಕಾರ್ಯಕರ್ತೆಗೆ ಮಾಸಿಕ ಗೌರವಧನ ರೂ.4000 ಮತ್ತು ಎಂಟು ದೈನಂದಿನ ಕೆಲಸವನ್ನು ಸೇರಿಸಿ ರೂ. 2 ಸಾವಿರ ಮತ್ತು ವಿವಿಧ ಚಟುವಟಿಕೆ ಆಧಾರಿತ ಕೆಲಸಕ್ಕೆ 2 ಸಾವಿರದಿಂದ 3 ಸಾವಿರ, ಇವೆಲ್ಲವನ್ನು ಸೇರಿಸಿ ಒಟ್ಟು ರೂ. 8000-9000 ಗಳಷ್ಟು ಅನುದಾನ ನಿಗದಿ ಮಾಡಲಾಗಿದೆ. ಪ್ರೋತ್ಸಾಹ ಧನ ಮತ್ತು ಗೌರವಧನ ಸೇರಿ ನಿಶ್ಚಿತ ಗೌರವಧನ ರೂ. 12,000ಯನ್ನು ಪ್ರತಿ ತಿಂಗಳು ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಗಳಲ್ಲಿ ಈ ಕಾರ್ಯಕರ್ತೆಯರಿಗೆ ಅಗತ್ಯವಾಗಿ ಬೇಕಾದಷ್ಟು ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್, ಸ್ಯಾನಿಟೈಸರ್ ಇತ್ಯಾದಿಗಳನ್ನು ನೀಡಲಾಗಿದೆ. ಅವರೆಲ್ಲರೂ ಮುಖಕ್ಕೆ ಕರವಸ್ತ್ರವನ್ನು ಕಟ್ಟಿಕೊಂಡು ಸೋಂಕಿತರ ನಡುವೆ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಂಕು ತಗುಲಿಸಿಕೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಸರ್ಕಾರದ ಅಂದಾಜಿನಂತೆ ಈ ಮುಂದಿನ ದಿನಗಳಲ್ಲಿ ಸೋಂಕು ಇನ್ನೂ ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ. ಪ್ರತಿ ದಿನವೂ ಜನರೊಂದಿಗೆ ಬೆರೆತು ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುವ ಆತಂಕ ಉಂಟಾಗಿದೆ. ಆದ್ದರಿಂದ ಸೋಂಕು ನಿಯಂತ್ರಿಸಲು ಅಮೂಲ್ಯವಾದ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಆರೋಗ್ಯವನ್ನು ರಕ್ಷಿಸುವ ಎಲ್ಲಾ ರಕ್ಷಣಾ ಸಾಮಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಬೇಕು. ಘೋಷಣೆ ಮಾಡಿರುವ ರೂ. 2000 ಮತ್ತು ರೂ. 3000 ಪ್ಯಾಕೇಜ್ ಸಂಪೂರ್ಣ ಹಣವನ್ನು ಈ ಕೂಡಲೇ ಕಾರ್ಯಕರ್ತೆಯರಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.