ಹಾಸನ: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ತನ್ನದೆ ಛಾಪು ಮೂಡಿಸಿ 2012 ರಿಂದ 2019ರ ವರೆಗೆ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಸಾಕಾನೆ ಅರ್ಜುನ ಮಣ್ಣಲ್ಲಿ ಮಣ್ಣಾಗಿದ್ದಾನೆ. ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಗ್ರಾಮದ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅರ್ಜುನ ಆನೆಯ ಅಂತ್ಯಕ್ರಿಯೆಯನ್ನು ಇಂದು ನೆರವೇರಿಸಲಾಯಿತು.
ಮೈಸೂರಿನಿಂದ ಬಂದಿದ್ದ ಪುರೋಹಿತ ವರ್ಗ ಅರ್ಜುನನ ಕಳೆಬರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಜಿಲ್ಲಾಡಳಿತದಿಂದ ಅರ್ಜುನನಿಗೆ ಸರ್ಕಾರಿ ಗೌರವ ಸಮರ್ಪಿಸಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿಸಲಾಗಿತು. ಅಗಲಿದ ಅರ್ಜುನನಿಗೆ ಮಾವುತ ವಿನು ಕಣ್ಣೀರುಡುತ್ತಲೇ ಪ್ರದಕ್ಷಿಣಿ ಹಾಕಿ ಪೂಜೆ ಸಲ್ಲಿಸಿದರು.
ಅಂತ್ಯ ಸಂಸ್ಕಾರಕ್ಕೂ ಮುನ್ನ ವೈದ್ಯರ ನೆರವಿನೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನನ ಎರಡೂ ದಂತವನ್ನು ತೆಗೆದುಕೊಂಡರು. 1968ರಲ್ಲಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಾಕನಕೋಟೆ ಅರಣ್ಯದಲ್ಲಿ ಖೆಡ್ಡಾಗೆ ಕೆಡವಿ ಅರ್ಜುನನನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದರು. ಆದರೆ, ಅದೀಗ ಇತಿಹಾಸ.
ಪೂಜೆ ಮುಗಿದ ಮೇಲೆ ಜೆಸಿಬಿಯಿಂದ 15 ಅಡಿಗಳ ಆಳದವರೆಗೆ ಗುಂಡಿ ತೋಡಲಾಯಿತು. ಈ ವೇಳೆ ಅಲ್ಲಿದ್ದ ಜನರು ಸಮಾಧಿಗೆ ಉಪ್ಪು, ಸುಣ್ಣ, ಬ್ಲೀಚಿಂಗ್ ಪೌಡರ್ ಹಾಕಿದರು. ಬಳಿಕ ಜೆಸಿಬಿ ಸಹಾಯದಿಂದ ಅರ್ಜುನನ ದೇಹವನ್ನ ಸಮಾಧಿಗೆ ಇಳಿಸಿ ಮಣ್ಣು ಮುಚ್ಚಲಾಯಿತು. 8 ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಗೆ ವಿದಾಯ ಹೇಳಲಾಯಿತು.
ಕಲ್ಲಂಗೆ ಕೆಲ್ಸ ಮಾಡ್ತಿದ್ಯಲ್ಲೋ ಎದ್ದೇಳೋ ಕಂದ: ಅರ್ಜುನನ್ನು ನೋಡಿಕೊಳ್ಳುತ್ತಿದ್ದ ಮಾವುತ ವಿನೋದ್ ಆಕ್ರಂದನ ಮುಗಿಲು ಮುಟ್ಟಿತ್ತು. ಕಲ್ಲಂಗೆ ಕೆಲ್ಸ ಮಾಡ್ತಿದ್ಯಲ್ಲೋ ಎದ್ದೇಳೋ ಕಂದ.. ಎಂದು ಮಾವುತ ವಿನು ಪರಿ ಪರಿಯಾಗಿ ಬೇಡಿಕೊಳ್ಳುತ್ತಾ ಕಣ್ಣೀರಿನ ವಿದಾಯ ಹೇಳಿದರು. ನನ್ನ ಆನೆಯನ್ನು ಬದುಕಿಸಿಕೊಡಿ.. ನನ್ನ ಆನೆಯನ್ನು ಮೈಸೂರಿಗೆ ಕಳುಸಹಿಸಿಕೊಡಿ.. ಇಲ್ಲವೇ ನನ್ನನ್ನು ಅರ್ಜುನನ ಜೊತೆ ಮಣ್ಣು ಮಾಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದ ದೃಶ್ಯ ನೋಡುಗರ ಮನ ಕಲುಕಿತು.
ಜಿಲ್ಲಾಧಿಕಾರಿ ಸತ್ಯಭಾಮ, ಎಸ್ಪಿ ಮೊಹಮ್ಮದ್ ಸುಜೇತ ಅವರು ಅರ್ಜುನ ಸಾವಿಗೆ ಜನರೊಂದಿಗೆ ಮೌನಾಚರಣೆ ಮಾಡಿದರು. ಅಂತ್ಯ ಸಂಸ್ಕಾರ ವೇಳೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಪ್ರತಿಭಟನೆ ಮುಂದಾಗಿದ್ದು ಅವರನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಲಘು ಲಾಟಿ ಪ್ರಹಾರ ನಡೆಸಿದ ಘಟನೆ ಕೂಡ ನಡೆಯಿತು.
ಸೋಮವಾರ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ರೇಡಿಯೋ ಕಾಲರ್ ಹಾಕುವ ಸಂದರ್ಭದಲ್ಲಿ ಕಾಡಾನೆ ಜೊತೆಗೆ ಕಾಳಗಕ್ಕಿಳಿದ ಸಂದರ್ಭದಲ್ಲಿ ಅರ್ಜುನ ಅಲ್ಲೇ ಇದ್ದ ಮಾವುತನ ಕಣ್ಣ ಮುಂದೆ ಹೋರಾಟ ನಡೆಸುತ್ತಾ ವೀರ ಮರಣ ಹೊಂದಿದ್ದ. ಬಳಿಕ ಮಾವುತ ಆನೆಯ ಮೇಲರಗಿ ಸಣ್ಣ ಮಗುವಿನಂತೆ ತನ್ನ ಅಳಲನ್ನು ಕಣ್ಣೀರು ಹಾಕಿದ್ದಾನೆ.
ಇಂದು ಕೂಡ ದುಃಖದಲ್ಲಿದ್ದ ಮಾವುತ ಆನೆ ನೋಡಿ ಕಣ್ಣೀರಿಡುತ್ತಾ ಅಸ್ವತ್ಥಗೊಂಡಿದ್ದು, ಆತನಿಗೆ ತಕ್ಷಣ ಪ್ರಥಮ ಚಿಕಿತ್ಸೆಗಾಗಿ ಸಕಲೇಶಪುರದ ಗ್ರಾಫರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇತ್ತ ಹಿರಿಯ ಆನೆಯನ್ನು ಕಾರ್ಯಾಚರಣೆಗೆ ಬಳಸಬಾರದಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಅರ್ಜುನ ಆನೆಯ ಹಿನ್ನೆಲೆ : ಅರ್ಜುನ ಆನೆಯನ್ನು 1968ರಲ್ಲಿ ಮೈಸೂರು ಜಿಲ್ಲೆಯ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಸುಮಾರು 22 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ 64 ವರ್ಷದ ಅರ್ಜುನ ಆನೆ ಭಾಗವಹಿಸಿತ್ತು. ಜೊತೆಗೆ ಮೈಸೂರಿನ ಜನರಿಗೆ ಬಲರಾಮ ಆನೆ ಬಿಟ್ಟರೇ, ಅರ್ಜುನ ತುಂಬ ಅಚ್ಚುಮೆಚ್ಚಾಗಿದ್ದ. ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹೆಚ್. ಡಿ ಕೋಟೆಯ ಬಳ್ಳೆ ಆನೆ ಶಿಬಿರದಲ್ಲಿ ನೆಲೆಸಿದ್ದ ಅರ್ಜುನನು ಹುಲಿ, ಆನೆ ಸೆರೆ ಕಾರ್ಯಾಚರಣೆಯಲ್ಲಿ ಪಳಗಿ ವಿಶೇಷ ಪಾತ್ರವಹಿಸಿದ್ದ.
ಮಾವುತರಿಗೆ ಅರ್ಜುನ ಹೆಸರಲ್ಲಿ ಪ್ರಶಸ್ತಿ ನೀಡಿ: 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಸೇವೆಯನ್ನು ಪರಿಗಣಿಸಿ ಪ್ರತಿ ವರ್ಷ ಮೈಸೂರು ದಸರೆಯಲ್ಲಿ ಮಾವುತರಿಗೆ ಅರ್ಜುನನ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಳೆದ 23 ವರ್ಷಗಳಿಂದ ಅರ್ಜುನನಿಗೂ ಮತ್ತು ಮೈಸೂರಿಗೂ ಅವಿನಾಭಾವ ಸಂಬಂಧ ಇದೆ. ಅಲ್ಲದೆ, ದಸರಾ ಜಂಬೂ ಸವಾರಿ ವೇಳೆ ಅರ್ಜುನನ ಕೊಡುಗೆ ಸಾಕಷ್ಟು ಇದೆ. ಆತ 8 ಬಾರಿ ನಾಡಿನ ಅಧಿ ದೇವತೆ, ತಾಯಿ ಚಾಮುಂಡೇಶ್ವರಿ ದೇವಿಯ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ್ದಾನೆ. ರಾಜಗಾಂಭೀರ್ಯದಿಂದ ಕಾರ್ಯನಿರ್ವಹಿಸಿದ್ದಾನೆ. ದಸರಾ ಮಾತ್ರವಲ್ಲದೆ ನೂರಾರು ಕಾಡಾನೆ ಕಾರ್ಯಾಚರಣೆಯಲ್ಲೂ ಭಾಗಿಯಾಗಿದ್ದಾನೆ. ಹೀಗಾಗಿ ಅರ್ಜುನನ ಹೆಸರು ಮೈಸೂರಿನ ದಸರೆಯ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಸುವಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿ ವರ್ಷ ಅರ್ಜುನನ ಹೆಸರಿನಲ್ಲಿ ಮಾವುತರಿಗೆ ಪ್ರಶಸ್ತಿಯನ್ನು ನೀಡಬೇಕು ಎಂದು ದಿನೇಶ್ ಗೂಳಿಗೌಡ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಕಾಡಾನೆ ದಾಳಿ; ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು, ಕಣ್ಣೀರಿಟ್ಟ ಮಾವುತರು